ಲಕ್ನೋ: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಮುಂದಿನ ತಿಂಗಳಿಂದ ರಾಜ್ಯಾದ್ಯಂತ ಆರಂಭಿಸಲಾಗುವುದು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
ದೇವಿ ಸರಸ್ವತಿಯ ವಿಶೇಷ ಪೂಜೆಯ ದಿನವಾದ ವಸಂತ ಪಂಚಮಿಯಿಂದ 'ಅಭ್ಯುದಯ' ಎಂದು ಹೆಸರಿಸಲಾಗಿರುವ ಈ ಕೋಚಿಂಗ್ ಸೌಲಭ್ಯ ಆರಂಭವಾಗಲಿದೆ ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: ಗಣರಾಜ್ಯೋತ್ಸವದ ಪರೇಡ್ಗೆ ತಯಾರಿ.. ಪ್ರಧಾನಿ ಸಮ್ಮುಖದಲ್ಲಿ ಪ್ರದರ್ಶನ..
ಮೊದಲ ಹಂತದಲ್ಲಿ ರಾಜ್ಯದ 18 ವಿಭಾಗೀಯ ಕೇಂದ್ರಗಳಲ್ಲಿ ಕೋಚಿಂಗ್ ಆರಂಭವಾಗಲಿದ್ದು, ಈ ಹಂತದಲ್ಲಿ ನೇರವಾಗಿ ಹಾಗೂ ವರ್ಚುವಲ್ ಎರಡೂ ರೀತಿಯಲ್ಲಿ ತರಬೇತಿ ನಡೆಯಲಿದೆ. ಅಧಿಕಾರಿಗಳು ಹಾಗೂ ವಿಷಯ ತಜ್ಞರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯಗಳನ್ನು ಈ ಯೋಜನೆಗೆ ಬಳಸಲಾಗುತ್ತಿದ್ದು, ಯೋಜನೆಯ ಸಮರ್ಪಕ ಜಾರಿಗೆ ಕಮೀಟಿಯೊಂದನ್ನು ಸಹ ರಚಿಸಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ ಮಾಹಿತಿ ನೀಡಿದ್ದಾರೆ.
ನೀಟ್, ಐಐಟಿಜೆಇ, ಎನ್‌ಡಿಎ, ಸಿಡಿಎಸ್ ಮತ್ತು ಯುಪಿಎಸ್‌ಸಿ ಪರೀಕ್ಷೆಗಳು ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡಲಾಗುವುದು. ಈ ಕೋಚಿಂಗ್ ಕೇಂದ್ರಗಳು ಯುವಕರಿಗೆ ತರಬೇತಿಯ ಹೊಸ ವೇದಿಕೆಯನ್ನು ಒದಗಿಸುವ ಮೂಲಕ ಅವರ ಅಭ್ಯುದಯಕ್ಕೆ ಶ್ರಮಿಸಲಿವೆ ಎಂದು ಆದಿತ್ಯನಾಥ್ ಹೇಳಿದರು.
ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ತರಬೇತಿಗಳಿಗಾಗಿ ಉತ್ತರ ಪ್ರದೇಶದ ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಗೆ ಹೋಗುವ ಅಗತ್ಯವನ್ನು ತಪ್ಪಿಸುವುದಾಗಿ ಸಿಎಂ ಕಳೆದ ವರ್ಷ ಭರವಸೆ ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ಉತ್ತರ ಪ್ರದೇಶ ಸರ್ಕಾರ ಈಗ ತನ್ನ ರಾಜ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ತರಬೇತಿ ನೀಡುವ ಅಭ್ಯುದಯ ಯೋಜನೆ ಆರಂಭಿಸಿದೆ.