ಲಖನೌ: ಪೊಲೀಸ್ ಠಾಣೆಯೊಳಗೆ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪೊಲೀಸ್ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ಗೆ ಸಿಬಿಐ ನಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
2011ರಲ್ಲಿ ಲಖಿಂಪುರ ಖೇರಿ ಜಿಲ್ಲೆಯ ನಿಘಾಸನ್ ಪೊಲೀಸ್ ಠಾಣೆಯೊಳಗೆ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೆಬಲ್ ಅತೀಕ್ ಅಹ್ಮದ್‌ಗೆ ಒಂದು ಲಕ್ಷ ರೂಪಾಯಿ ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಿದೆ.
ಇನ್ನು ಡಿವೈಎಸ್ಪಿ ಇನಾಯತ್ ಉಲ್ಲಾ ಖಾನ್ಗೆ 50 ಸಾವಿರ ದಂಡ ಮತ್ತು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ಸಿಬಿಐ ವಕ್ತಾರ ಆರ್ಕೆ ಗೌರ್ ಹೇಳಿದರು.
ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿದ್ದರೂ ಸಹ ನ್ಯಾಯಾಲಯ ಕಾನ್‌ಸ್ಟೆಬಲ್‌ಗಳಾದ ಶಿವ ಕುಮಾರ್ ಮತ್ತು ಉಮಾ ಶಂಕರ್ನ್ನು ಮೇಲಿರುವ ಆರೋಪಗಳನ್ನು ಖುಲಾಸೆಗೊಳಿಸಿ ಬಿಡುಗಡೆ ಮಾಡಿದೆ ಎಂದು ಸಿಬಿಐ ವಕ್ತಾರ ಆರ್ಕೆ ಗೌರ್ ಹೇಳಿದರು.
ಪೊಲೀಸ್ ಠಾಣೆ ಆವರಣದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಈ ಘಟನೆ ಕುರಿತು ಲಖಿಂಪುರ ಖೇರಿಯ ನಿಘಾಸನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ಉತ್ತರಪ್ರದೇಶ ಸರ್ಕಾರದ ಕೋರಿಕೆಯ ಮೇರೆಗೆ ಡಿಸೆಂಬರ್ 20, 2011 ರಂದು ಸಿಬಿಐ ಪ್ರಕರಣ ದಾಖಲಿಸಿತ್ತು ಎಂದು ಅವರು ಹೇಳಿದರು.
ಜೂನ್ 10, 2011ರಂದು ಎಮ್ಮೆಗಳನ್ನು ಹೊಲಕ್ಕೆ ಮೇಯಿಸಲು ಹೋದ 14 ವರ್ಷದ ಮಗಳು ಮನೆಗೆ ವಾಪಸ್ಸಾಗದಿದ್ದಾಗ ಬಾಲಕಿ ತಾಯಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು. ಈ ವೇಳೆ ಪೊಲೀಸ್ ಠಾಣೆಯಲ್ಲಿ ಮಗಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಕಂಡಿದ್ದಾಳೆ. ಮಗಳ ಮೈ ಮೇಲಿರುವ ಗಾಯದ ಗುರುತುಗಳನ್ನು ತಾಯಿಯನ್ನು ಅನುಮಾನಕ್ಕಿಡು ಮಾಡಿತ್ತು. ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಾಲಕಿಯನ್ನು ಅತ್ಯಾಚಾರ ಮತ್ತು ಕೊಲೆ ಮಾಡಿದ್ದಕ್ಕಾಗಿ ಅತೀಕ್ ಅಹ್ಮದ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿ-ಸಿಐಡಿ ಆರಂಭದಲ್ಲಿ ತನಿಖೆ ನಡೆಸಿತು. ಪೇದೆಗಳಾದ ಶಿವ ಕುಮಾರ್ ಮತ್ತು ಉಮಾಶಂಕರ್ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಬಳಿಕ ಸಿಬಿಐ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು.
ತನಿಖೆ ನಡೆಸಿದ ಸಿಬಿಐ ಬಾಲಕಿ ಮೇಲೆ ಮುಖ್ಯ ಪೇದೆ ಅತೀಕ್ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂಬುದು ಸಾಬೀತಾಗಿತ್ತು. ಸಾಕ್ಷ್ಯಗಳನ್ನು ನಾಶ ಮಾಡಲು ಸಹಕರಿಸಿದ್ದ ಡಿವೈಎಸ್ಪಿ ಸೇರಿದಂತೆ ಮೂವರ ವಿರುದ್ಧ ಕೋರ್ಟ್ಗೆ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಆದ್ರೆ ಮುಖ್ಯ ಪೇದೆ ಮತ್ತು ಡಿವೈಎಸ್ಪಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ಸಾರ್ವಜನಿಕ ಅಭಿಯೋಜಕ ದೀಪ್ ನಾರಾಯಣ್ ಹೇಳಿದ್ದಾರೆ.