ನವದೆಹಲಿ: ಚೀನಾದ ಸೈನ್ಯವು ತಮ್ಮನ್ನು ಜವಾಬ್ದಾರಿಯುತ ಪಡೆಗಳೆಂದು ಹೇಳಿಕೊಳ್ಳುತ್ತದೆ. ಆದರೆ, ಇತ್ತೀಚೆಗೆ ಲಡಾಖ್‌ನ ಪಾಂಗೊಂಗ್ ತ್ಸೋ ಸರೋವರ ಪ್ರದೇಶದಲ್ಲಿ ಭಾರತೀಯ ಸೈನಿಕರೊಂದಿಗೆ ಘರ್ಷಣೆ ನಡೆಸಿದಾಗ ಚೀನಾದ ಪಡೆಗಳು ಕೋಲುಗಳು, ಮುಳ್ಳುತಂತಿ ಮತ್ತು ಕಲ್ಲುಗಳನ್ನು ಬಳಸಿದ್ದವು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
'ಚೀನಾದ ಸೈನಿಕರ ವರ್ತನೆ, ಕಾಶ್ಮೀರ ಕಣಿವೆಯಲ್ಲಿ ನುಸುಳುವ ಪಾಕಿಸ್ತಾನ ಮೂಲದ ಕೊಲೆಗಡುಕರಂತೆಯೇ ಇರುತ್ತದೆ. ಪಾಂಗೊಂಗ್ ತ್ಸೋ ಸರೋವರ ಪ್ರದೇಶದಲ್ಲಿ ಭಾರತೀಯ ಪಡೆಗಳೊಂದಿಗೆ ಹೋರಾಡುವಾಗ ಚೀನಾದ ಪಡೆಗಳು ಕೋಲುಗಳು, ಮುಳ್ಳುತಂತಿ ಮತ್ತು ಕಲ್ಲುಗಳನ್ನು ಬಳಸಿದ್ದವು. ಆ ಸಮಯದಲ್ಲಿ ಚೀನಾದ ಸೈನಿಕರ ಸಂಖ್ಯೆ ಹೆಚ್ಚಿತ್ತು. ಅವರ ಸೈನಿಕರು ಅಲ್ಲಿನ ಭಾರತೀಯ ಸೈನಿಕರ ಬಗ್ಗೆ ದೌರ್ಜನ್ಯದಿಂದ ವರ್ತಿಸಿದ್ದರು. ಆದರೆ, ನಮ್ಮ ಪ್ರದೇಶಗಳಿಂದ ಚೀನಿಯರನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆಯು ಅಂತಹ ತಂತ್ರಗಳನ್ನು ಎಂದಿಗೂ ಬಳಸುವುದಿಲ್ಲ' ಎಂದು ಸೇನಾ ಅಧಿಕಾರಿ ವರ್ಗ ತಿಳಿಸಿದೆ.
ಎರಡೂ ದೇಶಗಳ ಸೈನಿಕರು ಲಡಾಕ್‌ನಿಂದ ಅರುಣಾಚಲ ಪ್ರದೇಶದವರೆಗೆ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಶಸ್ತ್ರಸಜ್ಜಿತರಾಗಿದ್ದಾರೆ. ಆದರೆ, 1967 ರಿಂದ ಇಲ್ಲಿಯವರೆಗೆ ಯಾವುದೇ ಗುಂಡು ಹಾರಿಲ್ಲ.
ಉಭಯ ದೇಶಗಳ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದ ಕಾರಣ ಚೀನಾ ಇತ್ತೀಚೆಗೆ ಗಡಿಯ ಉದ್ದಕ್ಕೂ 5,000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ. ಭಾರತ ಕೂಡ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿದೆ. ಆದರೂ ಯಾವುದೇ ಕ್ರಮ ಕೈಗೊಳ್ಳದಂತೆ ಭಾರತ ಎಚ್ಚರ ವಹಿಸಿದೆ. ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಸೈನಿಕರನ್ನು ಸ್ಥಳಾಂತರಿಸಲು ಭಾರಿ ವಿಮಾನಗಳನ್ನು ಬಳಸಲಾಗುತ್ತಿದೆ.