ಉನ್ನಾವ್ (ಉತ್ತರ ಪ್ರದೇಶ): ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ತಿಹಾರ್ ಜೈಲಿನಲ್ಲಿರುವ ಕುಲದೀಪ್ ಸೆಂಗಾರ್ ಜಾಮೀನಿನ ಬಗ್ಗೆ ಕಾಂಗ್ರೆಸ್ ಸದಸ್ಯೆ ಅಲ್ಕಾ ಲಂಬಾ, ಅವಹೇಳನಕಾರಿಯಾಗಿ ಟೀಕಿಸಿದ್ದಾರೆ ಎಂದು ಕುಲದೀಪ್ ಸೆಂಗಾರ್ ಪುತ್ರಿ ಐಶ್ವರ್ಯ ಸೆಂಗಾರ್ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
2017 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿದ್ದಕ್ಕಾಗಿ ಬಿಜೆಪಿ ಶಾಸಕನಾಗಿದ್ದ ಕುಲದೀಪ್ ಸೆಂಗಾರ್ಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿತ್ತು. ಕುಲದೀಪ್ ಸೆಂಗರ್ ಜೊತೆಗಿನ ಇತರ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಇನ್ನು ಕುಲದೀಪ್ ಸೆಂಗಾರ್ ಬಗ್ಗೆ ಮೇ 23ರಂದು ಆಮ್ ಆದ್ಮಿ ಪಕ್ಷದ ಮಾಜಿ ಹಾಗೂ ಹಾಲಿ ಕಾಂಗ್ರೆಸ್ನ ಸದಸ್ಯೆ ಅಲ್ಕಾ ಲಂಬಾ ಟ್ವೀಟ್ ಮಾಡಿದ್ದು, ಅಲಹಾಬಾದ್ ಹೈಕೋರ್ಟ್ ಕುಲದೀಪ್ ಸೆಂಗಾರ್ ಅವರಿಗೆ ಪ್ರಧಾನಿ ಮತ್ತು ಗೃಹ ಸಚಿವರ ಆದೇಶದ ಮೇರೆಗೆ ಜಾಮೀನು ನೀಡಿದೆ ಎಂದಿದ್ದರು.
ಸದ್ಯ ಈ ಟ್ವೀಟ್ ಬಗ್ಗೆ ತೀವ್ರ ವಿವಾದ ಉಂಟಾಗಿದ್ದು, ನನ್ನ ತಂದೆಯ ಬಗ್ಗೆ ಇಲ್ಲ ಸಲ್ಲದ ಆರೋಪವೆಸಗಿದ್ದಾರೆ ಹಾಗೂ ನ್ಯಾಯಾಲಯವನ್ನೂ ಸಹ ಅಲ್ಕಾ ಲಂಬಾ ಟ್ವೀಟ್ ಮಾಡುವ ಭರದಲ್ಲಿ ನಿಂದಿಸಿದ್ದಾರೆ ಎಂದು ಕುಲದೀಪ್ ಸೆಂಗಾರ್ ಅವರ ಪುತ್ರಿ ಐಶ್ವರ್ಯ ಸೆಂಗಾರ್ ಉನ್ನಾವೋ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಉಳಿದ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ಆದರೆ, ನಾವು ಯಾವುದೇ ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಹೀಗಿರುವಾಗ ಅಲ್ಕಾ ಲಂಬಾ ಈ ರೀತಿಯಾಗಿ ಟ್ವೀಟ್ ಮಾಡಿರುವುದು ನನಗೆ ಮತ್ತು ನನ್ನ ತಂಗಿಗೆ ಮಾನಸಿಕ ಯಾತನೆಯನ್ನು ಉಂಟು ಮಾಡಿದಂತಾಗಿದೆ ಎಂದು ಐಶ್ವರ್ಯ ಸೆಂಗಾರ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಅಲ್ಕಾ ಲಾಂಬಾ ಅವರ ಟ್ವಿಟರ್ ಖಾತೆಯ ಮೂಲಕ ಕುಲದೀಪ್ ಸೆಂಗಾರ್ ಹಾಗೂ ಕುಟುಂಬದ ವಿರುದ್ಧ ಅಸಭ್ಯವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿದ್ದು, ಮುಂದಿನ ತನಿಖೆ ನಡೆಸಲಿದ್ದೇವೆ ಎಂದು ಉನ್ನಾವೊದ ಎಸ್‌ಪಿ ವಿಕ್ರಾಂತ್‌ವೀರ್ ಹೇಳಿದ್ದಾರೆ.