ಉನ್ನಾವೋ(ಉತ್ತರ ಪ್ರದೇಶ): ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಇಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.
ಪ್ರಶಾಂತ್ ಉಪಾಧ್ಯಾಯ ಮೃತ ವೈದ್ಯ. 2018ರಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆ ಪೊಲೀಸ್ ವಶದಲ್ಲಿದ್ದಾಗ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ವೈದ್ಯರಾದ ಪ್ರಶಾಂತ್ ಉಪಾಧ್ಯಾಯ ಚಿಕಿತ್ಸೆ ನೀಡಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದರು. ಆಸ್ಪತ್ರೆಯಿಂದ ಪೊಲೀಸ್ ಠಾಣೆ ತಲುಪಿದ ಕೆಲ ಗಂಟೆಗಳ ನಂತರ ಅತ್ಯಾಚಾರ ಸಂತ್ರಸ್ತೆ ತಂದೆ ಸಾವಿಗೀಡಾಗಿದ್ದರು.
ಅತ್ಯಾಚಾರ ಸಂತ್ರಸ್ತೆ ತಂದೆ ಸತ್ತ ನಂತರ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಪ್ರಶಾಂತ್ ಉಪಾಧ್ಯಾಯ ಅವರನ್ನ ಅಮಾನತು ಮಾಡಲಾಗಿತ್ತು, ಈ ಪ್ರಕರಣದಲ್ಲಿ ಪ್ರಶಾಂತ್ ಸಿಬಿಐನಿಂದ ವಿಚಾರಣೆಗೆ ಒಳಪಟ್ಟಿದ್ದರು. ಸ್ವಲ್ಪ ದಿನಗಳ ನಂತರ ವೈದ್ಯರನ್ನ ಫತೇಪುರ್ ಆಸ್ಪತ್ರೆಗೆ ನಿಯೋಜಿಸಲಾಗಿತ್ತು.
ಇಂದು ಬೆಳಗ್ಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪ್ರಶಾಂತ್, ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಪ್ರಶಾಂತ್ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ. ಮೃತ ವೈದ್ಯ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಮಂಗಳವಾರ ಅತ್ಯಾಚಾರ ಸಂತ್ರಸ್ತೆ ತಂದೆ ಹತ್ಯೆ ಪ್ರಕರಣ ಸಂಬಂಧ ಕೋರ್ಟ್ ವಿಚಾರಣೆ ನಡೆಯಬೇಕಿದೆ. ಹೀಗಿರುವಾಗ ಒಂದು ದಿನದ ಹಿಂದೆ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಸಾವಿಗೀಡಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಉನ್ನಾವೋ ಸಂತ್ರಸ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಅವರು ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರೆ. ಅಲ್ಲದೆ ಬಾಲಕಿ ತಂದೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ಅತುಲ್ ಸೆಂಗಾರ್ ಜೈಲಿನಲ್ಲಿದ್ದಾರೆ.