ನವದೆಹಲಿ: ದೇಶದಲ್ಲಿ ಜಾರಿಗೊಂಡಿರುವ ಅನ್ಲಾಕ್ 1.0 ನಾಳೆ ಮುಕ್ತಾಯಗೊಳ್ಳಲಿದ್ದು, ಜುಲೈ 1ರಿಂದ ದೇಶಾದ್ಯಂತ ಅನ್ಲಾಕ್ 2.0 ಆರಂಭಗೊಳ್ಳಲಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿ ಬೇಸರ ಹೊರ ಹಾಕಿದರು.
ಕೊರೊನಾ ವಿರುದ್ಧದ ಹೋರಾಟದೊಂದಿಗೆ ನಾವು ಇದೀಗ ಅನ್ಲಾಕ್ 2.0 ಪ್ರವೇಶ ಪಡೆದುಕೊಂಡಿದ್ದೇವೆ. ಈ ವೇಳೆ ದೇಶದ ಜನರು ಹೆಚ್ಚು ಎಚ್ಚರವಾಗಿರಬೇಕು ಎಂದು ಮನವಿ ಮಾಡಿದರು. ದೇಶದಲ್ಲಿ ಅನ್ಲಾಕ್ 1.0 ಜಾರಿಗೊಳ್ಳುತ್ತಿದ್ದಂತೆ ಜನರು ನಿಯಮ ಪಾಲನೆ ಮಾಡದೇ ಇರುವ ಕಾರಣ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಯಿಂದ ಹೊರಗಡೆ ಹೋಗುವ ಸಂದರ್ಭದಲ್ಲಿ ಮಾಸ್ಕ್ ಹಾಕಿಕೊಳ್ಳದೇ ಹೋಗುತ್ತಿರುವುದು ಬೇಸರದ ಸಂಗತಿ ಎಂದರು.
ಕಂಟೈನ್ಮೆಂಟ್ ಝೋನ್ಗಳಲ್ಲಿ ಜನರು ಹೆಚ್ಚು ಜಾಗರೂಕರಾಗಿರಬೇಕಾಗಿದೆ ಎಂದಿರುವ ನಮೋ, ದೇಶದ ಪ್ರಧಾನ ಮಂತ್ರಿಯಿಂದ ಹಿಡಿದು ಹಳ್ಳಿಯ ಸಾಮಾನ್ಯ ಪ್ರಜೆಗೂ ಒಂದೇ ನಿಮಯ. ದೇಶದ ನೂರಾರು ಕೋಟಿ ಜನರ ಜೀವ ಉಳಿಸುವ ಸಲುವಾಗಿ ನಾವು ನಿಮಯ ಜಾರಿಗೊಳಿಸಿದ್ದು, ನಿಯಮಕ್ಕಿಂತಲೂ ದೇಶದಲ್ಲಿ ಯಾರೂ ದೊಡ್ಡವರು ಇಲ್ಲ ಎಂದರು.
ಲಾಕ್ಡೌನ್ ವೇಳೆ ನಾವು ಬಹಳ ಗಂಭೀರವಾಗಿ ನಿಯಮ ಪಾಲನೆ ಮಾಡಿದ್ದು, ಇದೀಗ ಅಂತಹ ಬದ್ಧತೆ ತೋರುವ ಅವಶ್ಯಕತೆ ಇದೆ ಎಂದು ನಮೋ ಮನವಿ ಮಾಡಿಕೊಂಡರು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಹಾಗೂ ನಿಯಮಿತವಾಗಿ ಕೈ ತೊಳೆಯುವುದನ್ನ ಮುಂದುವರಿಸಬೇಕಾಗಿದೆ ಎಂದು ಮನವಿ ಮಾಡಿಕೊಂಡರು.