ತಿರುವಂತನಪುರಂ : ಕೆಲ ರಾಜಕೀಯ ಪಕ್ಷಗಳು ಮತ್ತು ದೇಶದ ಹೊರಗಿನ ಕೈಗಳಿಂದ ತಮ್ಮ ನಕಲಿ ಅಪಪ್ರಚಾರದಿಂದ ರೈತರ ಪ್ರತಿಭಟನೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಅವರು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು.
ಕೃಷಿ ಕಾನೂನುಗಳ ವಿರುದ್ಧ ದೇಶದ ಹೊರಗಿನ ಕೆಲವು ಶಕ್ತಿಗಳ ಕೈವಾಡವಿದೆ ಎಂಬ ಸಾಕಷ್ಟು ಮಾಹಿತಿ ಹೊರ ಬರುತ್ತಿವೆ. ಭಾರತದ ಪ್ರಗತಿಯನ್ನು ತಡೆಯಲು ಮತ್ತು ದೇಶ ಕೆಣಕಲು ರೈತರ ಆಂದೋಲನ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ, ರಾಜಕೀಯ ಪಕ್ಷಗಳು ಅಂತಹವರ ಬಲೆಗೆ ಬೀಳಬೇಡಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ. ಆಂದೋಲನ ಕೊನೆಗೊಳಿಸಿ, ಮಾತುಕತೆ ನಡೆಸಲು ಮುಂದಾಗಿ ಎಂದರು.
ಇದನ್ನೂ ಓದಿ...ಸತ್ಯ, ಸಹಾನುಭೂತಿ, ಸಾಮರಸ್ಯಕ್ಕಾಗಿ ಸಾಮಾಜಿಕ ಜಾಲತಾಣದ ಯೋಧರಾಗಿ - ರಾಗಾ ಕರೆ
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಕ್ರೀಡಾಪಟು ಪಿ.ಟಿ.ಉಷಾ ವಿರುದ್ಧ ಕಾಂಗ್ರೆಸ್ ಯುವ ವಿಭಾಗ ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಪಿ.ಟಿ.ಉಷಾ, ಸಚಿನ್ನಂತಹ ದೇಶದ ಶ್ರೇಷ್ಠ ರಾಷ್ಟ್ರೀಯತಾವಾದಿ ಆಟಗಾರರನ್ನು ಅವಮಾನಿಸುವ ಪ್ರಯತ್ನ ನಡೆಯುತ್ತಿರುವುದು ದುರದೃಷ್ಟಕರ.
ಕೇರಳ ಶೇ.96ರಷ್ಟು ಸಾಕ್ಷರತೆ ಮತ್ತು ರಾಜಕೀಯ ಪ್ರಜ್ಞೆ ಹೊಂದಿರುವ ರಾಜ್ಯ. ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಇಂತಹ ನಡೆಯಿಂದ ಹೊರಬರಬೇಕು ಎಂದರು. ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರ ಮಹಿಳೆಯರಿಗೆ ಶಬರಿಮಲೆಗೆ ಅವಕಾಶ ನೀಡುವ ನಿರ್ಧಾರ ತೆಗೆದುಕೊಂಡಾಗ ಏನೂ ಮಾತನಾಡದ ಕಾಂಗ್ರೆಸ್, ವಿಧಾನಸಭಾ ಚುನಾವಣೆಯ ಸಿದ್ಧತೆ ಪ್ರಾರಂಭವಾಗುತ್ತಿದ್ದಂತೆ ಆ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ.
ಆಗ ಮೌನವಾಗಿದ್ದ ಕಾಂಗ್ರೆಸ್, ಈಗ ಕಾನೂನು ಜಾರಿಗೆ ತರುವುದಾಗಿ ಮತ್ತು ಕೇರಳ ಸರ್ಕಾರದ ನಿರ್ಧಾರಕ್ಕೆ ವಿರುದ್ಧ ಎಂದು ಹೇಳುತ್ತಿದೆ. ಆದರೆ, ಈವರೆಗೂ ಕಾಂಗ್ರೆಸ್ ಸಣ್ಣ ಪ್ರಕರಣವೂ ದಾಖಲಾಗಿಲ್ಲ ಎಂದರು. ಆದರೆ, ಶಬರಿಮಲೆ ವಿಷಯಕ್ಕೆ ಸಂಬಂಧಿಸಿದಂತೆ ಕೇರಳದ ಸರ್ಕಾರದ ಮೇಲೆ ತಿರುಗಿಬಿದ್ದ 55 ಸಾವಿರಕ್ಕೂ ಅಧಿಕ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜಕೀಯ ಪ್ರೇರಿತ ಆಂದೋಲನಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಹೇಳಿದ್ದ ಕಾಂಗ್ರೆಸ್, ತಮ್ಮ ರಾಜಕೀಯ ಲಾಭಕ್ಕಾಗಿ ಈ ಸಮಸ್ಯೆ ಮುಂದಿಟ್ಟುಕೊಂಡು ಪ್ರಚಾರ ನಡೆಸಲು ಮುಂದಾಗಿದೆ ಎಂದರು.