ನವದೆಹಲಿ: ಟಾಲಿವುಡ್ನ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಭರತ್ ಅನೇ ನೇನು' ಸಿನಿಮಾದಲ್ಲಿ ಸಿಎಂ ಆಗಿದ್ದ ನಾಯಕ ಸಂಚಾರ ನಿಯಮ ಪಾಲಿಸದ ವಾಹನ ಸವಾರರ ಮೇಲೆ ಗರಿಷ್ಠ ದಂಡ ವಿಧಿಸುವ ನಿಯಮ ಆಫ್ ಹಾಗೂ ಆನ್ ಸ್ಕ್ರೀನ್ನಲ್ಲಿ ಮೆಚ್ಚಿಗೆ ಪಡೆದಿತ್ತು. ಈಗ ಇದನ್ನೇ ಹೋಲುವ ಸಂಚಾರಿ ಕಾಯ್ದೆ ಜಾರಿಗೆ ಬರುತ್ತಿದೆ.
ಕೇಂದ್ರ ಸಚಿವ ಸಂಪುಟ ಮೋಟಾರ್ ವಾಹನ (ತಿದ್ದುಪಡಿ) ಕಾಯ್ದೆ ಪ್ರಸ್ತಾವನೆಗೆ ಅನುಮತಿ ನೀಡಿದೆ. ಸಾರಿಗೆ ನಿಯಮ ಉಲ್ಲಂಘನೆಯ ನಿಯಂತ್ರಣ, ಸವಾರರ ಹಾಗೂ ಸಾರ್ವಜನಿಕರ ಸುರಕ್ಷತೆ, ದಂಡ ಪಾವತಿ ಶುಲ್ಕ ಏರಿಕೆಯ ಜೊತೆಗೆ ಸಂಚಾರ ಠಾಣೆಗಳಲ್ಲಿನ ಭ್ರಷ್ಟಾಚಾರವನ್ನು ತಹಬದಿಗೆ ತರುವ ಕಠಿಣ ನಿಯಮಗಳು ತಿದ್ದುಪಡಿ ಆಗಲಿರುವ ಕಾಯ್ದೆಯಲ್ಲಿ ಒಳಗೊಂಡಿದೆ.
ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದವರಿಗೆ ಇಂದಿನಕ್ಕಿಂತ ಐದು ಪಟ್ಟು ಅಂದರೇ ₹ 10 ಸಾವಿರ ದಂಡ, ನಿಗದಿಗಿಂತ ವೇಗದ ಚಾಲನೆ ಅಥವಾ ಸಿಗ್ನಲ್ ಜಂಪ್ಗೆ ₹ 5 ಸಾವಿರ (ಹತ್ತು ಪಟ್ಟು) ದಂಡ ಬೀಳಲಿದೆ. ಬೈಕ್ ಹೀಲಿಂಗ್ ಮಾಡಿ ನಿಯಮ ಮುರಿಯುವರು ₹ 1 ಲಕ್ಷದವರೆಗೂ ದಂಡ ತೆರಬೇಕಾಗಲಿದೆ.
ಪ್ರಸ್ತಾವಿತ ತಿದ್ದುಪಡಿಯು ರಸ್ತೆ ಅಪಘಾತಕ್ಕೆ ಒಳಗಾದವರ ನೆರವಿಗೆ ಧಾವಿಸುವ ಜನರಿಗೆ ಕಿರುಕುಳವಾಗದಂತೆ ತಡೆಯಲಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೀಡಲಾಗುವ ಪರಿಹಾರ ಮೊತ್ತ ₹ 10 ಲಕ್ಷ ಹಾಗೂ ಶಾಶ್ವತ ವಿಕಲಚೇತನತೆ ಅಥವಾ ಗಾಯಾಳುಗಳಿಗೆ ನೀಡಲಾಗುವ ಪರಿಹಾರ ಮೊತ್ತ ₹ 5 ಲಕ್ಷಕ್ಕೆ ಏರಿಕೆ ಆಗಲಿದೆ.