ಕೋಲ್ಕತ್ತಾ/ಪಶ್ಚಿಮ ಬಂಗಾಳ: ಸಿಟಿಜನ್ ಫೋರಮ್ ನ ಸಿಎಎ ವಿರೋಧಿ ಪ್ರತಿಭಟನಾಕಾರರು ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲಿಗರ ನಡುವೆ ನಡೆದ ಗಲಾಟೆ ವೇಳೆ ಇಬ್ಬರು ಗುಂಡೇಟಿಗೆ ಬಲಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಶಿರಾಬಾದ್ ಜಿಲ್ಲೆಯಲ್ಲಿ ಈ ಸಂಘರ್ಷ ನಡೆದಿದ್ದು, ಘಟನೆಯಲ್ಲಿ ಮೂವರಿಗೆ ಗುಂಡೇಟು ತಗುಲಿದೆ. ಇನ್ನು ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರ ಮೇಲೆ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ತಿದ್ದುಪಡಿ ಮಾಡಿದ ಕಾಯ್ದೆಯನ್ನು ವಿರೋಧಿಸಿ ಸ್ಥಳೀಯ ರಸ್ತೆಯಲ್ಲಿ ಬಂದ್ ನಡೆಸಲಾಗುತ್ತಿತ್ತು, ಈ ವೇಳೆ ಅಲ್ಲಿನ ಟಿಎಂಸಿ ನಾಯಕರು ಮತ್ತು ನಿವಾಸಿಗಳ ವೇದಿಕೆ ನಾಗರಿಕ್ ಮಂಚ ನಿವಾಸಿಗಳ ನಡುವೆ ಎನ್ಆರ್ಸಿ ವಿಚಾರವಾಗಿ ಗಲಾಟೆ ಶುರುವಾಗಿತ್ತು. ಘಟನೆ ಹಿಂಸಾತ್ಮಕ ರೂಪ ಪಡೆದಿದ್ದು, ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಮತ್ತು ಸ್ಥಳೀಯ ನಿವಾಸಿಗಳು ಪರಸ್ಪರ ಗುಂಡು ಹಾರಿಸಿ, ಬಾಂಬುಗಳನ್ನು ಎಸೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬಗ್ಗೆ ತನಿಖೆ ನಡೆಸುವಂತೆ ಟಿಎಂಸಿ ಎಂಪಿ ಅಬು ತಾಹೇರ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ಮತ್ತು ಘಟನೆಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು "ಎಂದು ತಾಹೆರ್ ಆಗ್ರಹಿಸಿದ್ದಾರೆ. ಇನ್ನು ಗುಂಡೇಟಿನಿಂದ ಗಾಯಗೊಂಡವರನ್ನು ಮುರ್ಶಿರಾಬಾದ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿವೋರ್ವರು ಮಾಹಿತಿ ನೀಡಿದ್ದಾರೆ.