ಮುಂಬೈ: ಹಿಂದೆಲ್ಲಾ 'ನೀನು ನನಗೆ ರಕ್ತ ಕೊಡು, ನಾನು ನಿನಗೆ ಸ್ವಾತಂತ್ರ್ಯ ನೀಡುತ್ತೇನೆ' ಎಂಬ ಘೋಷಣೆಗಳು ಕೇಳಿ ಬರುತ್ತಿದ್ದವು. ಆದರೆ ಈಗ 'ನೀನು ನನಗೆ ಮತ ನೀಡು, ನಾನು ನಿನಗೆ ಲಸಿಕೆ ಕೊಡುತ್ತೇನೆ' ಎಂದು ಹೇಳುವ ಕಾಲ ಬಂದಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ವ್ಯಂಗ್ಯವಾಡಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಹಾರದಲ್ಲಿ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡುವ ಭರವಸೆಯೊಂದಿಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇದರ ವಿರುದ್ಧ ರಾವತ್ ಕಿಡಿಕಾರಿದ್ದಾರೆ. ಜಾತಿ, ಧರ್ಮದ ಹೆಸರಲ್ಲಿ ಮತ ಕೇಳುವುದಾಯಿತು, ಈಗೇನಿದ್ದರು ಕೋವಿಡ್ ವ್ಯಾಕ್ಸಿನ್ ಹೆಸರಲ್ಲಿ ಕೇಳಲಾಗುತ್ತಿದೆ. ಬಿಹಾರದಲ್ಲಿ ಬಿಜೆಪಿ ಪರ ಮತ ಚಲಾಯಿಸಿದವರಿಗೆ ಮಾತ್ರ ಲಸಿಕೆ ಕೊಡುತ್ತಾರೆಂದರೆ ಉಳಿದವರ ಪಾಡೇನು? ಇದು ಬಿಜೆಪಿಯ ತಾರತಮ್ಯ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ನಿನ್ನೆಯಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಕೊರೊನಾ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಂಗೀಕರಿಸಿದ ಕೂಡಲೇ ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದರು.