ಆಂಧ್ರ ಪ್ರದೇಶ: ತಿರುಮಲ ತಿರುಪತಿ ಆಡಳಿತ ಮಂಡಳಿ ದೇವಸ್ಥಾನದಲ್ಲಿ ಕೆಲಸ ಮಾಡುವ ಎಲ್ಲ ಉದ್ಯೋಗಿಗಳಿಗೆ ಯುಗಾದಿ ಉಡುಗೊರೆಯಾಗಿ ಎರಡು ಲಕ್ಷ ಲಡ್ಡುಗಳನ್ನ ವಿತರಿಸುತ್ತಿದೆ.
ಕೊರೊನಾ ವೈರಸ್ ಹಿನ್ನೆಲೆ, ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಿದ್ದು, ಭಕ್ತರಿಲ್ಲದೇ ದೇವಲಯ ಬಿಕೋ ಎನ್ನುತ್ತಿದೆ. ಶ್ರೀವಾರಿ ದರ್ಶನವನ್ನ ನಿಲ್ಲಿಸಲಾಗಿದ್ದರೂ, ಪುರೋಹಿತರು ವೆಂಕಟೇಶ್ವರನಿಗೆ ಎಲ್ಲ ಪೂಜಾ ಕೈಂಕರ್ಯಗಳನ್ನ ನೆರವೇರಿಸುತ್ತಿದ್ದಾರೆ. ಕೊರೊನಾ ವೈರಸ್ ಪರಿಣಾಮವಾಗಿ ಭಕ್ತರಿಗೆ ತಿರುಮಲಕ್ಕೆ ಭೇಟಿ ನೀಡಲು ಅನುಮತಿ ಇಲ್ಲ. ಹೀಗಾಗಿ ತಿರುಪತಿಯಲ್ಲಿ ಎರಡು ಲಕ್ಷ ಲಡ್ಡುಗಳನ್ನು ಸಂಗ್ರಹಿಸಲಾಗಿದೆ. ಈ ಲಡ್ಡುಗಳನ್ನ ದೇವಸ್ಥಾನದಲ್ಲಿ ಕೆಲಸ ಮಾಡುವ ಎಲ್ಲ ಉದ್ಯೋಗಿಗಳಿಗೆ ಯುಗಾದಿ ಉಡುಗೊರೆಯಾಗಿ ನೀಡಲು ಅಧಿಕಾರಿಗಳು ನಿರ್ಧರಿಸಿದ್ದು, ಎಲ್ಲ ಇಲಾಖೆಗಳಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರು ಮತ್ತು ನೈರ್ಮಲ್ಯ ಕಾರ್ಮಿಕರಿಗೆ ತಲಾ ಹತ್ತು ಲಡ್ಡುಗಳನ್ನ ವಿತರಿಸುವುದಾಗಿ ಆಡಳಿತ ಮಂಡಳಿ ತಿಳಿಸಿದೆ.
ತಿರುಪತಿಯಲ್ಲಿ 7,000 ಸಾಮಾನ್ಯ ನೌಕರರು ಮತ್ತು 15 ಸಾವಿರ ಗುತ್ತಿಗೆ ನೌಕರರಿದ್ದಾರೆ. ತಿರುಮಲ ಲಡ್ಡು ಮಾರಾಟ ಕೇಂದ್ರದಲ್ಲಿ ಸಂಗ್ರಹವಾಗಿರುವ ಲಡ್ಡುಗಳನ್ನ ವಿಶೇಷ ವಾಹನಗಳಲ್ಲಿ ತಿರುಪತಿ ಆಡಳಿತ ಕಟ್ಟಡಕ್ಕೆ ತರಲಾಗುತ್ತಿದೆ.