ವಿಶಾಖಪಟ್ಟಣಂ(ಆಂಧ್ರಪ್ರದೇಶ): ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ ಕಾಣಿಕೆಯಾಗಿ ಬಂದಿರುವ ಸ್ಥಿರಾಸ್ತಿ ಮಾರಾಟಕ್ಕೆ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ದ ಆಡಳಿತ ಮಂಡಳಿ ಮುಂದಾಗಿದೆ. ಇವುಗಳ ನಿರ್ವಹಣೆ ಕಷ್ಟ ಎಂಬ ಕಾರಣವನ್ನು ನೀಡಿ ಈ ನಿರ್ಧಾರಕ್ಕೆ ಬಂದಿದೆ. ದೇಶಾದ್ಯಂತ ತಿಮ್ಮಪ್ಪನಿಗೆ ಭಕ್ತರು ನೀಡಿರುವ ಭೂಮಿಯನ್ನು ಮಾರಾಟ ಮಾಡುವ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ಪ್ರತ್ಯೇಕ ಸಮಿತಿಯನ್ನು ಕೂಡ ನೇಮಿಸಿದ್ದು, ಇದಕ್ಕೆ ಆಂಧ್ರಪ್ರದೇಶದ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಜೊತೆಗೆ ವಿಪಕ್ಷಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರೂ ಟಿಟಿಡಿ, ಅನೂರ್ಜಿತ ಆಸ್ತಿ ಎಂದು ಹೇಳಿ ಮಾರಾಟಕ್ಕೆ ಮುಂದಾಗಿದೆ.
ತಮಿಳುನಾಡಿನಲ್ಲಿರುವ 23 ಆಸ್ತಿಗಳು ಸೇರಿದಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಆಸ್ತಿಗಳ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೇ 23 ರಂದು ಟಿಟಿಡಿ ಬಿಡುಗಡೆ ಮಾಡಿರುವ ಪ್ರಕಟಣೆಯಂತೆ ಈವರೆಗೆ ಹಾರಾಜಿಗೆ ಗುರುತಿಸಿರುವ ಆಸ್ತಿಯ ಮೌಲ್ಯ 23.92 ಕೋಟಿ ರೂಪಾಯಿ ಅಂತ ಲೆಕ್ಕಹಾಕಲಾಗಿದೆ. ವಾಸ್ತವದಲ್ಲಿ ಅನೂರ್ಜಿತ ಆಸ್ತಿಗಳ ಮೌಲ್ಯ 100 ಕೋಟಿ ರೂಪಾಯಿಗಳಿದೆ. ಈವರೆಗೆ ಗುರುತಿಸಿರುವ ಆಸ್ತಿ ಅಲ್ಲದೇ, ದೇಶಾದ್ಯಂತ ದಾನಿಗಳು ತಿಮ್ಮಪ್ಪನಿಗೆ ನೀಡಿರುವ ಆಸ್ತಿಗಳನ್ನು ಭವಿಷ್ಯದಲ್ಲಿ ಮಾರಾಟ ಮಾಡಲು ಸಿದ್ಧವಾಗ್ತಿದೆ ಎಂದು ಹೇಳಲಾಗುತ್ತಿದೆ.
ನಗರ ಪ್ರದೇಶದಲ್ಲಿರು ಆಸ್ತಿ ಮಾರಾಟ?
ಗ್ರಾಮೀಣ ಪ್ರದೇಶದಲ್ಲಿರುವ ವ್ಯವಸಾಯದ ಭೂಮಿಯನ್ನು ಮಾರಾಟ ಮಾಡುವುದಲ್ಲದೇ, ನಗರ ಪ್ರದೇಶ ವ್ಯಾಪ್ತಿಯಲ್ಲಿರುವ ಭಾರಿ ಬೆಲೆಬಾಳುವ ಆಸ್ತಿಯ ಮಾರಾಟಕ್ಕೂ ಟಿಟಿಡಿ ಸಿದ್ಧವಾಗ್ತಿದೆ. ಗುಂಟೂರು, ಹೈದರಾಬಾದ್‌ನಲ್ಲಿನ ದೇವಾಲಯದ ಸ್ಥಳಗಳು, ಮನೆಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ಬೆಂಗಳೂರು ನಗರದಲ್ಲಿರುವ ಕೆಲ ಆಸ್ತಿಗಳು ಮಾರಾಟಕ್ಕೆ ಸಿದ್ಧವಾಗಿರುವ ಮಾಹಿತಿ ಇದೆ.
ಟಿಟಿಡಿ ನಿರ್ಧಾರಕ್ಕೆ ತೀವ್ರ ವಿರೋಧ
ಟಿಟಿಡಿ ನಿರ್ಧಾರಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೆಲ ಸಂಸದರು, ಟಿಟಿಡಿ ಆಡಳಿತ ಮಂಡಳಿಯ ಮಾಜಿ ಸದಸ್ಯರು, ಆಧ್ಯಾತ್ಮಿಕ ಚಿಂತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ ಆಸ್ತಿಗಳ ಮಾರಾಟವನ್ನು ನಿಲ್ಲಿಸಬೇಕು ಎಂದು ಟಿಟಿಡಿ ಮಂಡಳಿಯ ಪ್ರತ್ಯೇಕ ಆಹ್ವಾನಿತ ಹಾಗೂ ರಾಜ್ಯಸಭಾ ಸದಸ್ಯ ರಾಕೇಶ್ ಸಿನ್ಹಾ, ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿಗೆ ಪತ್ರ ಬರೆದಿದ್ದಾರೆ. ತಮ್ಮ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ದೇವರ ಆಸ್ತಿಗಳ ಮಾರಾಟವನ್ನು ನಿಲ್ಲಿಸಬೇಕು. ಇದು ತಿಮ್ಮಪ್ಪನ ಭಕ್ತರು ನೀಡಿರುವ ದೇಣಿಗೆಯಾಗಿದೆ. ಭಕ್ತರ ಭಾವನೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕು.
ಟಿಟಿಡಿ ನಿರ್ಣಯಂ ಅಸಂಬದ್ಧವಾಗಿದೆ ಎಂದು ಆಂಧ್ರ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ, ಟಿಟಿಡಿ ಮಾಜಿ ಸದಸ್ಯ ವೈಆರ್ ಕೃಷ್ಣಾರಾವ್ ತಿಳಿಸಿದ್ದಾರೆ.
ಟಿಟಿಡಿ ನಿರ್ಯಣ ತರ್ಕಬದ್ಧವಾಗಿಲ್ಲ ಭಕ್ತರು ದೇವರಿಗೆ ನೀಡಿರುವ ಆಸ್ತಿಯನ್ನು ಮಾರುವ ಹಕ್ಕು ಆಡಳಿತ ಮಂಡಳಿಗೆ ಇಲ್ಲ. ಆಸ್ತಿಗಳನ್ನು ಕಾಪಾಡಿಕೊಳ್ಳಲು ಆಗುತ್ತಿಲ್ಲ ಮಾರಾಟ ಮಾಡುತ್ತೇವೆ ಎಂದರೆ ಹೇಗೆ? ಟಿಟಿಡಿಗೆ ಚೈನ್ನೈ, ದೆಹಲಿಯಲ್ಲಿ ಉಪ ಸ್ಥಾಯಿ ಸಮಿತಿಗಳ ಅಧಿಕಾರಿಗಳು ಇದ್ದಾರೆ. ಅವರ ಕೆಲಸ ಆಸ್ತಿಗಳನ್ನು ಕಾಪಾಡುವುದು. ಟಿಟಿಡಿ ಮಂಡಳಿಯನ್ನು ಪುನಾರಚನೆ ಮಾಡಬೇಕು. ರಾಜಕೀಯ, ವ್ಯಾಪಾರದ ಹಿನ್ನೆಲೆಯುಳ್ಳವರನ್ನು ಇಲ್ಲಿಂದ ತೊಲಗಿಸಬೇಕು ಎಂದು ಕೃಷ್ಣಾರಾವ್ ಒತ್ತಾಯಿಸಿದ್ದಾರೆ.
ಟಿಟಿಡಿ ಆಸ್ತಿಗಳ ಮಾರಾಟದ ಬಗ್ಗೆ ಈ ತಿಂಗಳ 28 ರಂದು ನಡೆಯಲಿರುವ ಧರ್ಮಾಧಿಕಾರಿಗಳ ಸಭೆಯಲ್ಲಿ ಮತಕ್ಕೆ ಹಾಕಬೇಕು ಎಂದು ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಭಾನುಪ್ರಕಾಶ್ ರೆಡ್ಡಿ ಒತ್ತಾಯಿಸಿದ್ದಾರೆ.
ದೇವರ ಆಸ್ತಿಗಳನ್ನು ಮಾರಾಟ ಮಾಡುತ್ತದೆ ಎಂದು ವೈವಿ ಸುಬ್ಬಾರೆಡ್ಡಿ ಈ ಹಿಂದೆ ಆರೋಪ ಮಾಡಿದ್ದರು. ಇದೀಗ ಇವರ ನೇತೃತ್ವದಲ್ಲೇ ಆಡಳಿತ ಮಂಡಳಿ ಆಸ್ತಿಗಳ ಮಾರಾಟಕ್ಕೆ ಹೇಗೆ ನಿರ್ಧಾರ ಕೈಗೊಂಡಿತು? ಮಂಡಳಿ ಸದಸ್ಯರಲ್ಲಿ ತುಂಬಾ ಮಂದಿ ಈ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಇದರ ನಡುವೆಯೇ ಇದೇ ತಿಂಗಳ 28 ರಂದು ನಡೆಯುವ ಬೋರ್ಡ್ ಸಭೆಯಲ್ಲಿ ಮತದಾನ ನಡೆಯಲಿ.
ತಪ್ಪು ಮಾಡುತ್ತಿಲ್ಲ; ಟಿಟಿಡಿ ಸ್ಪಷ್ಟನೆ
ಟಿಟಿಡಿ ಆಸ್ತಿಗಳನ್ನು ತಾವು ಮಾರಾಟ ಮಾಡುತ್ತಿರುವ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಟಿಟಿಡಿ ಆಸ್ತಿಗಳನ್ನು ಮಾರಾಟ ಮಾಡುವ ಬಗ್ಗೆ 2016ರಲ್ಲೇ ನಿರ್ಣಯ ಕೈಗೊಳ್ಳಲಾಗಿತ್ತು. ಇಂದು ವಿರೋಧ ವ್ಯಕ್ತಪಡಿಸುತ್ತಿರುವವರೇ ಆಗ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ದೇವರಿಗೆ ತುಂಬಾ ಆಸ್ತಿಗಳು ಇವೆ. ಆಸ್ತಿ ಮಾರಾಟ ಮಾಡಬೇಕು ಎನ್ನುವುದು ನಮ್ಮ ಉದ್ದೇಶ ಅಲ್ಲ. ಅನೂರ್ಜಿತವಾಗಿ ಇರುವ ಆಸ್ತಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದುಕೊಂಡಿದ್ದೇವೆ. 28 ರಂದು ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಹೇಳಿದ್ದಾರೆ.
ಟಿಟಿಡಿ ನಿರ್ಧಾರ ರಾಜಕೀಯ ವಲಯದಲ್ಲಿನ ಚರ್ಚೆಗೂ ಕಾರಣವಾಗಿದೆ. ಬಿಜೆಪಿ ಸಂಸದ ರಘು ರಾಮಕೃಷ್ಣಂ ರಾಜು, ಜಿವಿಎಲ್ ನರಸಿಂಹರಾವ್ ಟಿಟಿಡಿ ನಿರ್ಧಾರವನ್ನು ವಿರೋಧಿಸಿದ್ದಾರೆ. ಮಂಡಳಿ ನಿರ್ಧಾರದ ವಿರುದ್ಧ ರಾಜಕೀಯ ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಭಕ್ತರು ಸ್ವಾಮಿಗೆ ನೀಡಿರುವ ಆಸ್ತಿಗಳನ್ನು ಮಾರಾಟ ಮಾಡುವುದು ದೇವರಿಗೆ ಮಾಡಿದ ಅವಮಾನ ಆಗುತ್ತದೆ ಎಂದು ಜನಸೇನಾ ಅಧ್ಯಕ್ಷ, ನಟ ಪವನ್ ಕಲ್ಯಾಣ್ ಟ್ವೀಟ್ ಮಾಡಿದ್ದಾರೆ.