ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸದ ಸಂದರ್ಭದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಅಮೆರಿಕದ ಹಿರಿಯ ಆಡಳಿತ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಸಂಸ್ಥೆಗಳ ಬಗ್ಗೆ ಅಮೆರಿಕಕ್ಕೆ ಅಪಾರ ಗೌರವವಿದೆ. ಅವುಗಳನ್ನು ಎತ್ತಿ ಹಿಡಿಯುವ ಸಲುವಾಗಿ ಭಾರತವನ್ನು ಪ್ರೋತ್ಸಾಹಿಸುವುದನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಸಿಎಎ, ಎನ್‌ಆರ್‌ಸಿ ಕಾಯ್ದೆಗಳ ಬಗ್ಗೆ ಪತ್ರಕರ್ತರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಮೆರಿಕ ಅಧ್ಯಕ್ಷರು ಈ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಅವರ ಜೊತೆ ಮಾತನಾಡಲಿದ್ದಾರೆ. ಭಾರತ ತನ್ನ ಪ್ರಜಾಪ್ರಭುತ್ವ ಸಂಪ್ರದಾಯ ಎತ್ತಿ ಹಿಡಿಯುವುದನ್ನು ಪ್ರಪಂಚ ಎದುರು ನೋಡುತ್ತಿದೆ ಎಂಬುದನ್ನು ಗಮನಿಸಿ ಎಂದಿದ್ದಾರೆ.
ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂ, ಸಿಖ್, ಜೈನ, ಪಾರ್ಸಿ, ಬೌದ್ಧ ಮತ್ತು ಕ್ರಿಶ್ಚಿಯನ್ ನಿರಾಶ್ರಿತರಿಗೆ ಪೌರತ್ವ ನೀಡುವ ಭರವಸೆಯನ್ನು ಈ ಸಿಎಎ ಕಾಯ್ದೆ ನೀಡುತ್ತದೆ. ಆದರೆ ಕೇರಳ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಪಂಜಾಬ್ ಸೇರಿದಂತೆ ಕೆಲವು ರಾಜ್ಯಗಳು ಇದನ್ನು ಜಾರಿಗೆ ತರಲು ನಿರಾಕರಿಸಿದ್ದು, ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.
12 ಸದಸ್ಯರ ನಿಯೋಗದೊಂದಿಗೆ ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ರಂದು ಎರಡು ದಿನಗಳ ಭೇಟಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ಹೀಗೆ ಭೇಟಿ ನೀಡುವ ಗಣ್ಯರು ಅಹಮದಾಬಾದ್‌ನ ಮೊಟೇರಾ ಕ್ರೀಡಾಂಗಣದಲ್ಲಿ 'ನಮಸ್ತೆ ಟ್ರಂಪ್' ಹೆಸರಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಟ್ರಂಪ್ ಮತ್ತು ಅಮೆರಿಕ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ಫೆಬ್ರವರಿ 25 ರಂದು ನವದೆಹಲಿಗೆ ಬಂದಾಗ ಬಿಡುವಿಲ್ಲದಷ್ಟು ಕಾರ್ಯಕ್ರಮಗಳ ವೇಳಾಪಟ್ಟಿ ಹೊಂದಿದ್ದಾರೆ. ಮೂಲಗಳ ಪ್ರಕಾರ, ಒಪ್ಪಂದಗಳ ವಿನಿಮಯವನ್ನು ಹೊರತುಪಡಿಸಿ ಅನೇಕ ಸಭೆಗಳು ಮತ್ತು ನಿಯೋಗ ಮಟ್ಟದ ಮಾತುಕತೆಗಳು ನಡೆಯಲಿವೆ.