ನವದೆಹಲಿ: ಲಾಕ್‌ಡೌನ್ ಅವಧಿಯಲ್ಲಿ ಸರಕು ಸಾಗಿಸುವ ಟ್ರಕ್‌ಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಸಾಗಿಸುವ ಅಂತಾರಾಜ್ಯ ವಾಹನಗಳನ್ನು ಮಾದಕ ದ್ರವ್ಯ ಸಾಗಿಸಲು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಹೇಳಿದೆ.
ಕಳೆದ ಎರಡು ವಾರಗಳಲ್ಲಿ ದೇಶಾದ್ಯಂತ ಕಾರ್ಯಾಚರಣೆ ನಡೆಸಿದ ನಂತರ 60 ಕೆಜಿ ಅಫೀಮು, ಒಟ್ಟು 61,638 ಸೈಕೋಟ್ರೋಪಿಕ್ ಮಾತ್ರೆಗಳು, 840 ಬಾಟಲ್ ಕೊಡೆನ್ ಆಧಾರಿತ ಕೆಮ್ಮು ಸಿರಪ್ ಮತ್ತು 574 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಮಾದಕ ವಸ್ತು ಕಳ್ಳಸಾಗಣೆದಾರರ ಪ್ರಯತ್ನಗಳಿಗೆ ನೆರವಾಗಲು ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ಸರಕು ಸಾಗಿಸುವ ಅಂತಾರಾಜ್ಯ ವಾಹನಗಳನ್ನು ಬಳಸುತ್ತಿರುವುದು ಆತಂಕಕಾರಿ. ಈ ಹೊಸ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರಾಜ್ಯಗಳ ಗಡಿಯುದ್ದಕ್ಕೂ ಸಂಸ್ಥೆ ಕಟ್ಟೆಚ್ಚರ ವಹಿಸಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಉಪ ನಿರ್ದೇಶಕ (ಕಾರ್ಯಾಚರಣೆಗಳು) ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ.
ಈ ಜಾಲವು ಗುಜರಾತ್, ಒಡಿಶಾ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹರಡಿದೆ. ಪ್ರಕರಣವೊಂದರಲ್ಲಿ ಏಪ್ರಿಲ್ 26ರಂದು ಗುಜರಾತ್‌ನ ಪಟಾನ್ ಜಿಲ್ಲೆಯಲ್ಲಿ 61,368 ಸೈಕೋಟ್ರೋಪಿಕ್ ಮಾತ್ರೆಗಳು ಮತ್ತು 840 ಬಾಟಲ್ ಕೊಡೆನ್ ಆಧಾರಿತ ಕೆಮ್ಮು ಸಿರಪ್ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೆ.ಕುಮಾರ್ ಪಟೇಲ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ನೋಂದಾಯಿತ ವೈದ್ಯರಿಂದ ಪ್ರಿಸ್ಕ್ರಿಪ್ಷನ್ ಇಲ್ಲದೆ ಈ ಡ್ರಗ್ಸ್ಅನ್ನು ಯಾವುದೇ ಔಷಧಿ ಅಂಗಡಿಯಿಂದ ಮಾರಾಟ ಮಾಡಲು ಸಾಧ್ಯವಿಲ್ಲ. ಇವುಗಳು ಸಾಮಾನ್ಯವಾಗಿ ಅಕ್ರಮ ಔಷಧ ತಯಾರಕರು, ಸಗಟು ವ್ಯಾಪಾರಿಗಳು ಅಥವಾ ಚಿಲ್ಲರೆ ರಾಸಾಯನ ಶಾಸ್ತ್ರಜ್ಞರ ಮೂಲಕ ಅಕ್ರಮ ಮಾರುಕಟ್ಟೆಯನ್ನು ತಲುಪುತ್ತವೆ ಎಂದು ಹೇಳಿದ್ದಾರೆ.