ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 19,078 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 224 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,03,05,788 ಹಾಗೂ ಮೃತರ ಸಂಖ್ಯೆ 1,49,218ಕ್ಕೆ ಏರಿಕೆಯಾಗಿದೆ.
ಇಂಗ್ಲೆಂಡ್ನಲ್ಲಿ ಹೊಸ ರೂಪ ಪಡೆದ ಕೋವಿಡ್ ನಿನ್ನೆ ಭಾರತದಲ್ಲಿ ಮತ್ತೆ ನಾಲ್ವರಿಗೆ ಅಂಟಿದ್ದು, ಈವರೆಗೆ ದೇಶದಲ್ಲಿ ಒಟ್ಟು 29 ರೂಪಾಂತರಿ ಕೊರೊನಾ ವೈರಸ್ ಕೇಸ್ಗಳು ವರದಿಯಾಗಿವೆ. ಎಲ್ಲ 29 ಸೋಂಕಿತರನ್ನು ಆರೋಗ್ಯ ಕೇಂದ್ರಗಳಲ್ಲಿ ಐಸೋಲೇಷನ್ನಲ್ಲಿರಿಸಲಾಗಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಇಂದು ಕೇಂದ್ರ ಸರ್ಕಾರ ಡ್ರೈ ರನ್ ಆರಂಭಿಸಿದ್ದು, ಲಸಿಕೆ ನೀಡುವ ವೇಳೆ ಎದುರಾಗುವ ಸಮಸ್ಯೆಗಳನ್ನು ಗುರುತಿಸಲಿದೆ.
ಒಟ್ಟು 1,03,05,788 ಸೋಂಕಿತರ ಪೈಕಿ ಶೇ. 96.12 ರಷ್ಟು ಅಂದರೆ 99,06,387 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ ಶೇ.2.43 ರಷ್ಟು (2,50,183) ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜನವರಿ 1ರ ವರೆಗೆ 17,39,41,658 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 8,29,964 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.