ನವದೆಹಲಿ: ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 80 ಲಕ್ಷ ಗಡಿ ದಾಟಿದೆ. ಆದರೆ ಕಳೆದ ಆರು ವಾರಗಳಿಂದ ಹೊಸ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದ್ದು, ಸದ್ಯ 6 ಲಕ್ಷ ಕೇಸ್ಗಳು ಮಾತ್ರ ಸಕ್ರಿಯವಾಗಿವೆ. ಮರಣ ಪ್ರಮಾಣ ಶೇ.1.5 ರಷ್ಟಿದ್ದು, ಶೇ.90ಕ್ಕೂ ಹೆಚ್ಚು ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ 49,881 ಸೋಂಕಿತರು ಪತ್ತೆಯಾಗಿದ್ದು, 517 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 80,40,203 ಹಾಗೂ ಮೃತರ ಸಂಖ್ಯೆ 1,20,527ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 73,15,989 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 6,03,687 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಅಕ್ಟೋಬರ್ 29ರ ವರೆಗೆ 10,65,63,440 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 10,75,760 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.