ಚೆನ್ನೈ(ತಮಿಳುನಾಡು): ಮೇ 7ರಿಂದ ಸರ್ಕಾರಿ ಮದ್ಯದಂಗಡಿಗಳನ್ನು ತೆರೆಯಲು ತಮಿಳುನಾಡು ಸರ್ಕಾರ ಆದೇಶ ನೀಡಿದೆ. ಈ ನಿರ್ಧಾರವನ್ನು ಡಿಎಂಕೆ ಹಾಗೂ ಪಿಎಂಕೆ ಪಕ್ಷಗಳು ಖಂಡಿಸಿ ಸರ್ಕಾರದ ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿವೆ.
ಮದ್ಯದಂಗಡಿಗಳನ್ನು ತೆರೆಯುವ ತಮಿಳುನಾಡು ಸರ್ಕಾರದ ಈ ನಿರ್ಧಾರವನ್ನು ಗಮನಿಸಿದರೆ ಇದೊಂದು ಆಘಾತಕಾರಿ ವಿಷಯ ಎಂದು ಡಿಎಂಕೆ ಪಕ್ಷದ ಅಧ್ಯಕ್ಷ ಸ್ಟಾಲಿನ್ ಹೇಳಿದ್ದಾರೆ. ಮೇ 7ರಿಂದ ತಮಿಳುನಾಡು ಸರ್ಕಾರ ಮದ್ಯದಂಗಡಿಗಳನ್ನು ತೆರೆಯಲಾಗುವುದು ಎಂದು ಸೋಮವಾರ ಪ್ರಕಟಿಸಿದೆ. ಮದ್ಯದಂಗಡಿಗಳು ಬೆಳಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದು ಈ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಮಿಳುನಾಡು ಮತ್ತು ಕರ್ನಾಟಕದ ಗಡಿಗಳಲ್ಲಿನ ಜನರು ನಮ್ಮ ರಾಜ್ಯದಲ್ಲಿ ಮದ್ಯ ಸಿಗದ ಕಾರಣ ಅಲ್ಲಿಗೆ ತೆರಳುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರ ನಮ್ಮ ರಾಜ್ಯದಲ್ಲಿಯೇ ಎಣ್ಣೆ ಅಂಗಡಿಗಳನ್ನು ತೆಗೆಯಲು ನಿರ್ಧರಿಸಿದೆ ಎಂದು ಹೇಳಿದೆ. ಅದಲ್ಲದೆ ನಿರ್ಬಂಧಿತ ವಲಯಗಳಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟನೆ ನೀಡಿತ್ತು.
ಮದ್ಯ ಖರೀದಿಸುವ ವೇಳೆ ಕೆಲ ನಿಯಮಗಳನ್ನು ಉಲ್ಲೇಖಿಸಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಖರೀದಿಸಬೇಕು ಎಂದು ಮದ್ಯಪ್ರಿಯರಿಗೆ ಸರ್ಕಾರ ಸೂಚನೆ ನೀಡಿತ್ತು. ಸರ್ಕಾರದ ಈ ನಿರ್ಧಾರವನ್ನು ಅಲ್ಲಗಳೆದ ಇತರ ಪಕ್ಷಗಳು, ಮದ್ಯದಂಗಡಿ ತೆರೆಯುವುದರಿಂದ ಅನುಕೂಲಕ್ಕಿಂತ ವ್ಯತಿರಿಕ್ತ ಪರಿಣಣಾಮಗಳೇ ಜಾಸ್ತಿಯಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಪಿಎಂಕೆ ಸಂಸ್ಥಾಪಕ ಎಸ್ ರಾಮದಾಸ್ ಈ ಬಗ್ಗೆ ಮಾತನಾಡಿದ್ದು, ಕಳೆದ 40 ದಿನಗಳಿಂದ ಮದ್ಯದಂಗಡಿಗಳು ಮುಚ್ಚಲ್ಪಟ್ಟಿರುವ ಬಗ್ಗೆ ಯಾವುದೇ ನಕಾರಾತ್ಮಕ ವರದಿಗಳು ಬಂದಿಲ್ಲ ಹಾಗೂ ಇದೊಂದು ರಚನಾತ್ಮಕ ಮತ್ತು ಸಕಾರಾತ್ಮಕ ಬೆಳವಣಿಗೆಯಾಗಿದೆ. ಇದೀಗ ಪುನಃ ಮದ್ಯದಂಗಡಿಗಳನ್ನು ತೆರೆದರೆ ಇದರಿಂದ ಸಮಾಜಕ್ಕೆ ನಷ್ಟವೇ ಹೊರತು ಯಾವುದೇ ಲಾಭವಿಲ್ಲ, ಕೊರೊನಾ ವೈರಸ್ ಇನ್ನಷ್ಟು ಉಲ್ಬಣಗೊಳ್ಳಲು ಸರ್ಕಾರವೇ ಎಡೆಮಾಡಿಕೊಟ್ಟಂತಾಗುತ್ತದೆ ಎಂದಿದ್ದಾರೆ.
ಮದ್ಯಪಾನ ಮಾಡುವವರು ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ, ಮದ್ಯದಂಗಡಿಗಳನ್ನು ತೆರದರೆ ಕೊರೊನಾ ವೈರಸ್ ಮತ್ತಷ್ಟು ಹರಡಲಿದೆ ಎಂದು ಎಂಎಂಕೆ ಪಕ್ಷದ ಮುಖಂಡ ಜವಾಹಿರುಲ್ಲಾ ಹೇಳಿದ್ದಾರೆ. ತಮಿಳುನಾಡಿನ ರಾಜ್ಯ ಸರ್ಕಾರಕ್ಕೆ, ಮದ್ಯ ಮಾರಾಟವು ಒಂದು ಪ್ರಮುಖ ಆದಾಯದ ಮೂಲವಾಗಿದೆ. ವರ್ಷಕ್ಕೆ ಸುಮಾರು 30,000 ಕೋಟಿ ರೂ. ಆದಾಯವಾಗಲಿದೆ. ಆದರೆ, ಕಳೆದ 40 ದಿನಗಳಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದಾಗಿ ಈ ಆದಾಯ ಸ್ಥಗಿತಗೊಂಡಿದೆ.