ಚೆನ್ನೈ: ಪಟಾಕಿ ಮಾರಾಟ ಮತ್ತು ಬಳಕೆ ನಿಷೇಧದಿಂದ ರಾಷ್ಟ್ರೀಯ ಪಟಾಕಿ ಕೇಂದ್ರವಾದ ತಮಿಳುನಾಡಿನಲ್ಲಿ ಸುಮಾರು ಎಂಟು ಲಕ್ಷ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ರಾಜಸ್ಥಾನ ಮತ್ತು ಒಡಿಶಾ ರಾಜ್ಯಗಳಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಗುರುವಾರ ಆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ರಾಜಸ್ಥಾನ ಮತ್ತು ಒಡಿಶಾದ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ ಮತ್ತು ನವೀನ್ ಪಟ್ನಾಯಕ್ ಅವರಿಗೆ ಮುಖ್ಯಮಂತ್ರಿ ಕೆ. ಪಳನಿಸ್ವಾಮಿಯವರು ಒಂದೇ ರೀತಿಯ ಪತ್ರಗಳನ್ನು ತಲುಪಿಸಿದ್ದು, ಅದರಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಈಗಾಗಲೇ ಆರ್ಥಿಕತೆ ಕುಗ್ಗಿರುವ ಹಿನ್ನಲೆ ಎರಡೂ ರಾಜ್ಯಗಳಲ್ಲಿ ವಿಧಿಸಿರುವ ನಿಷೇಧವನ್ನು ಹಿಂಪಡೆಯಬೇಕೆಂದು ಕೇಳಿಕೊಂಡಿದ್ದಾರೆ.
"ದೇಶದ ಒಟ್ಟು ಪಟಾಕಿ ಉತ್ಪಾದನೆಯಲ್ಲಿ ಶೇಕಡಾ 90 ರಷ್ಟು ಪಾಲು ತಮಿಳುನಾಡಿನದ್ದು. ಇದು ಸುಮಾರು ಎಂಟು ಲಕ್ಷ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿಯೂ ಉದ್ಯೋಗವನ್ನು ಒದಗಿಸಿದೆ. ಅದೆಷ್ಟೋ ಮಂದಿಯ ಜೀವನ ಪಟಾಕಿ ಮಾರಾಟದಿಂದ ಬರುವ ಆದಾಯದ ಮೇಲೆ ನಿಂತಿದೆ. ನಿಮ್ಮ ರಾಜ್ಯಗಳಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾನು ವಿನಂತಿಸುತ್ತೇನೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಮುಂಗಡ ಶುಭಾಶಯಗಳು" ಎಂದು ಪಳನಿಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.