ಕೋಲ್ಕತ್ತಾ (ಪಶ್ಚಿಮ ಬಂಗಾಳ): ಲಾಕ್ಡೌನ್ ವೇಳೆ ಹೊರಗಡೆ ಓಡಾಡಲು ಸಾಧ್ಯವಾಗದ ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸಲು ತೃಣಮೂಲ ಕಾಂಗ್ರೆಸ್ನ ಮಹಿಳಾ ಘಟಕ ನಿರ್ಧರಿಸಿದೆ.
ಲಾಕ್ಡೌನ್ನಿಂದ ಮಹಿಳೆಯರಿಗೆ ಅಗತ್ಯ ವಸ್ತುಗಳಿಗಾಗಿ ಹೊರಗಡೆ ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸ್ಯಾನಿಟರಿ ನ್ಯಾಪ್ಕಿನ್ನಂತಹ ವಸ್ತುಗಳು ಸಿಗದೆ ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳು ಎದುರಾಗುವ ಸಂಭವವಿದೆ. ಆದ್ದರಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ವಸಹಾಯ ಸಂಘಗಳ ಸಹಕಾರದೊಂದಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಲು ಟಿಎಂಸಿ ಮಹಿಳಾ ಘಟಕ ನಿರ್ಧರಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಿಮ ಭಟ್ಟಾಚಾರ್ಯ, ಲಾಕ್ಡೌನ್ನಿಂದ ಮಹಿಳೆಯರಿಗೆ ಅಗತ್ಯ ವಸ್ತುಗಳು ಸಿಗುತ್ತಿಲ್ಲ. ನಗರದ ಪ್ರದೇಶದ ಮಹಿಳೆಯರಿಗಾದರೆ ಸಮಸ್ಯೆಯಿಲ್ಲ. ಆದರೆ, ಗ್ರಾಮೀಣ ಭಾಗದ ಮಹಿಳೆಯರು ಸ್ಯಾನಿಟರಿ ನ್ಯಾಪ್ಕಿನ್ ಸಿಗದ ಕಾರಣ ಶುಚಿತ್ವದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಇದರಿಂದ ಅವರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ನಾವು ಸ್ಯಾನಿಟರಿ ನ್ಯಾಪ್ಕಿನ್ ವಿತರಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.