ತಿರುಪತಿ(ಆಂಧ್ರಪ್ರದೇಶ): ತಿರುಮಲದ ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿರುವ ಅರ್ಚಕರು ಸೇರಿ ಹಲವರಿಗೆ ಕೊರೊನಾ ಸೋಂಕು ತಗುಲಿದ್ದು, ಇದರ ಮಧ್ಯೆ ದೇವಸ್ಥಾನ ಮಾಜಿ ಪ್ರಧಾನ ಅರ್ಚಕರೊಬ್ಬರು ಮಹಾಮಾರಿ ಕೋವಿಡ್-19 ವೈರಸ್‌ನಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
73 ವರ್ಷದ ಶ್ರೀನಿವಾಸ ದಿಕ್ಷಿತಲು ಇಂದು ಬೆಳಗ್ಗೆ ಸಾವನ್ನಪ್ಪಿದ್ದು, ಕಳೆದ ಮೂರು ದಶಕಗಳಿಂದಲೂ ಅವರು ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತಮಾಡಿರುವ ದೇವಸ್ಥಾನದ ಚೇರ್ಮನ್ ವೈ.ವೈ.ಸುಬ್ಬಾರೆಡ್ಡಿ, ಇವರು ಕಿಡ್ನಿ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಅದಕ್ಕಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗಿನಿಂದಲೂ ದೇವಸ್ಥಾನದ ಕಾರ್ಯಗಳಲ್ಲಿ ಭಾಗಿಯಾಗಿರಲಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಕೋವಿಡ್ ನಡುವೆ ಕೂಡ ಜೂನ್ 11ರಿಂದ ದೇವಸ್ಥಾನ ಭಕ್ತರಿಗಾಗಿ ಓಪನ್ ಆಗಿದೆ. ಇದಾದ ಬಳಿಕ ಕಳೆದೆರಡು ದಿನಗಳ ಹಿಂದೆ ಅಲ್ಲಿನ 14 ಅರ್ಚಕರಿಗೆ ಕೊರೊನಾ ಕಾಣಿಸಿಕೊಂಡಿತ್ತು. ಇದಕ್ಕೂ ಮೊದಲು ಟಿಟಿಡಿಯಲ್ಲಿ ಕೆಲಸ ಮಾಡುತ್ತಿದ್ದ 91 ಮಂದಿಗೆ ಕೊರೊನಾ ಸೋಂಕು ತಗುಲಿತ್ತು.