ನವದೆಹಲಿ: 1982ರಲ್ಲಿ ನಿರ್ಭಯಾ ಅಪರಾಧಿಗಳ ಮಾದರಿಯಲ್ಲೇ ಇಬ್ಬರು ಅತ್ಯಾಚಾರಿಗಳನ್ನು ಇದೇ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಆ ಪ್ರಕರಣ ಕೂಡ ನಿರ್ಭಯಾ ಕೇಸ್ನಷ್ಟೇ ಕ್ಲಿಷ್ಟಕರವಾಗಿತ್ತು. ಅದನ್ನು ಇಂದಿಗೂ ರಂಗ-ಬಿಲ್ಲ ಕೇಸ್ ಎಂದೇ ಇತಿಹಾಸ ಗುರುತಿಸುತ್ತಿದೆ.
ದಶಕಗಳ ಹಿಂದೆ ಅಂದರೆ, 1978ರಲ್ಲಿ ಕುಲ್ಜೀತ್ ಸಿಂಗ್ ಅಲಿಯಾಸ್ ರಂಗ ಮತ್ತು ಜಸ್ಬೀರ್ ಸಿಂಗ್ ಅಲಿಯಾಸ್ ಬಿಲ್ಲ ಎಂಬಿಬ್ಬರು ಅಪರಾಧಿಗಳು ಗೀತಾ, ಸಂಜಯ್ ಚೋಪ್ರಾ ಎಂಬ ಇಬ್ಬರು ಸಹೋದರ ಸಹೋದರಿಯನ್ನು ಅಪಹರಿಸಿದ್ದರು. ತಾವು ಅಪಹರಿಸಿದ ಇಬ್ಬರೂ ನೌಕಾಧಿಕಾರಿಯ ಮಕ್ಕಳೆಂದು ತಿಳಿದ ರಂಗ-ಬಿಲ್ಲ ಅವರನ್ನು ಹಿಂಸಿಸಿ ಅಮಾನುಷವಾಗಿ ಕೊಲೆಗೈದಿದ್ದರು. ಕೊಲೆಯಾಗುವ ಮುನ್ನ ಗೀತಾಳನ್ನು ಅತ್ಯಾಚಾರ ಮಾಡಲಾಗಿತ್ತು.
ಕೊಲೆ ಮತ್ತು ಅತ್ಯಾಚಾರದ ಅಪರಾಧದ ಹಿನ್ನೆಲೆ ರಂಗ ಮತ್ತು ಬಿಲ್ಲನಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ ಅವರನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಿಂದ ಫಕೀರಾ ಮತ್ತು ಕಲು ಎಂಬ ಇಬ್ಬರನ್ನು ಕರೆಸಿಕೊಳ್ಳಲಾಗಿತ್ತು. ಇವರ ಗಲ್ಲಿಗೂ ಮೊದಲು ಇವರಿಗೆ ಕುಡಿಯಲು ಟೀ ನೀಡಿ ಅವರ ಕೊನೆಯ ಇಚ್ಛೆಗಳನ್ನು ಕೇಳಲಾಗಿತ್ತು. ಆದರೆ, ಅಪರಾಧಿಗಳು ಯಾವುದೇ ಇಚ್ಛೆ ವ್ಯಕ್ತಪಡಿಸಲಿಲ್ಲ ಎಂದು ತಿಹಾರ್ ಜೈಲಿನ ಕಾನೂನು ಅಧಿಕಾರಿ ಸುನಿಲ್ ಗುಪ್ತ ಮತ್ತು ಪತ್ರಕರ್ತ ಸುನೇತ್ರ ಚೌಧರಿ ಅವರ ಪುಸ್ತಕ 'ಬ್ಲಾಕ್ ಕರೆಂಟ್' ನಲ್ಲಿ ಉಲ್ಲೇಖವಾಗಿದೆ.
ಗಲ್ಲಿನ ನಂತರವೂ ನಿಂತಿರಲಿಲ್ಲ ರಂಗನ ನಾಡಿ ಮಿಡಿತ:
1982ರ ಜನವರಿ 31, ಇಬ್ಬರೂ ಅಪರಾಧಿಗಳನ್ನೂ ನೇಣುಗಂಬಕ್ಕೇರಿಸುವ ಪ್ರಕ್ರಿಯೆ ವೇಳೆ ಕುತ್ತಿಗೆಗೆ ಹಗ್ಗ ಬಿಗಿದು ಎಳೆದ ನಂತರವೂ ರಂಗನ ನಾಡಿ ಮಿಡಿತ ಇನ್ನೂ ಬಡಿದುಕೊಳ್ಳುತ್ತಿತ್ತು ಎಂದು ವೈದ್ಯರು ತಿಳಿಸಿದರು. ಆಗ ತಕ್ಷಣವೇ ರಂಗನನ್ನು ಹಾಕಿದ್ದ ಮರಣ ಬಾವಿಗೆ ಗಾರ್ಡ್ನ ಇಳಿಸಿ ರಂಗನ ಕಾಲು ಎಳೆಸಿ ಕೊಲ್ಲಿಸಲಾಯಿತು ಎಂಬ ವಿಚಾರವೂ ಪುಸ್ತಕದಲ್ಲಿದೆ.