ಭಾರತದೊಂದಿಗೆ ಸೈನಿಕ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಟೈಗರ್ ಟ್ರಯಂಫ್'(ವ್ಯಾಘ್ರ ವಿಜಯ) ಜಂಟಿ ಸಮಾರಾಭ್ಯಾಸ ಘೋಷಣೆ ಮಾಡಿರುವುದು ಜಗತ್ತಿನ ಹಲವು ದೇಶಗಳ ಕುತೂಹಲಕ್ಕೆ ಕಾರಣವಾಗಿದೆ. ಅಮೆರಿಕದ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಸಮರಾಭ್ಯಾಸದ ಘೋಷಣೆ ಮಾಡಿದ್ದರು. ಎರಡೂ ದೇಶಗಳ ಮೂರೂ ಪಡೆಗಳ ಈ ಜಂಟಿ ಸಮರಾಭ್ಯಾಸವು ಉಭಯ ದೇಶಗಳ ಸಂಬಂಧಗಳನ್ನು ಮತ್ತಷ್ಟು ಆಳವಾಗಿಸುವ ಇಂಗಿತ ಹೊಂದಿತ್ತು.
ಅಮೆರಿಕ ಮತ್ತು ಭಾರತದ ನೌಕಾಪಡೆಗಳು 'ಮಲಬಾರ್' ಹೆಸರಿನಲ್ಲಿ ಜಂಟಿ ಸಮರಾಭ್ಯಾಸವನ್ನು 1992 ರಿಂದಲೇ ನಡೆಸುತ್ತ ಬಂದಿವೆ. ಭವಿಷ್ಯದಲ್ಲಿ ಯಾವುದಾದರೂ ವಿಶೇಷ ಕಾರ್ಯಾಚರಣೆಗಳನ್ನು ನಡೆಸಲು ನೆರವಾಗುವಂತೆ ಪರಸ್ಪರರ ಸಮರ ತಂತ್ರಗಳನ್ನು ಹಾಗೂ ಭದ್ರತಾ ದೃಷ್ಟಿಕೋನಗಳನ್ನು ಅರ್ಥ ಮಾಡಿಕೊಳ್ಳುವುದು ಈ ಜಂಟಿ ಸಮರಾಭ್ಯಾಸಗಳ ಮೊದಲ ಧ್ಯೇಯ.
ಈ ಸಮರಾಭ್ಯಾಸಕ್ಕೆ ಇತರ ಹಲವು ವಿಶೇಷ ಕಾರಣಗಳೂ ಇವೆ. ಮೂರೂ ಕಡೆ ಸಮುದ್ರವನ್ನು ಹೊಂದಿರುವ ತನ್ನ ಮೇಲೆ ನುಗ್ಗುವ ಶತ್ರುಗಳ ಮೇಲೆ ದಾಳಿ ಮಾಡುವ ವಿಶೇಷ ಕೌಶಲ್ಯಗಳನ್ನು ಭಾರತೀಯ ನೌಕಾಪಡೆ ಹೊಂದಿದೆ. ಶಾಂತ ಸಾಗರ ಹಾಗೂ ಅಟ್ಲಾಂಟಿಕ್ ಭಾಗದಲ್ಲಿ ಹಿಡಿತ ಹೊಂದಿರುವ ಹಾಗೂ ಅತ್ಯುತ್ತಮ ಎನಿಸಿಕೊಳ್ಳುವ ಗುರಿ ಹೊಂದಿರುವ ಅಮೆರಿಕದ ನೌಕಾಪಡೆಗೆ ಭಾರತೀಯ ನೌಕಾಪಡೆಯ ತಾಕತ್ತು ಗೊತ್ತಿದೆ. ಮಹಾಸಮುದ್ರಗಳ ಆ ಭಾಗದಲ್ಲಿ ಬಳಕೆಯಾಗುವ ತಂತ್ರಗಳು, ಭಾರತದಲ್ಲಿರುವುದಕ್ಕಿಂತ ಭಿನ್ನವಾಗಿವೆ. ಅವೇ ತಂತ್ರಗಳನ್ನು ಎಲ್ಲಾ ಪ್ರದೇಶಗಳಲ್ಲಿ ಬಳಸುವ ಮೂಲಕ ಯಶಸ್ವಿಯಾಗುವುದು ಅಮೆರಿಕದ ನೌಕಾಪಡೆಗೆ ಸಾಧ್ಯವಿಲ್ಲ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ನೌಕಾಪಡೆಯೊಂದಿಗೆ ಜಂಟಿ ಸಮರಾಭ್ಯಾಸ ನಡೆಸಲು ಅದು ಉತ್ಸುಕವಾಗಿದೆ.
ಕಳೆದ 27 ವರ್ಷಗಳಲ್ಲಿ, ಸಾವಿರಾರು ಅಧಿಕಾರಿಗಳು ಹಾಗೂ ಸಿಬ್ಬಂದಿ ಹಲವಾರು ಜಂಟಿ ಸಮರಾಭ್ಯಾಸಗಳನ್ನು ನಡೆಸಿದ್ದಾರೆ. ಪರಸ್ಪರರ ಸಹಕಾರದಿಂದ ಉಭಯ ದೇಶಗಳ ಸೈನ್ಯದ ಜಲಾಂತರ್ಗಾಮಿಗಳು, ಯುದ್ಧ ವಿಮಾನಗಳು ಮತ್ತು ಹಲವಾರು ಸಮರ ನೌಕೆಗಳು ಈ ಸಮರಾಭ್ಯಾಸಗಳನ್ನು ಯಶಸ್ವಿಯಾಗಿ ನಡೆಸಿವೆ. ಸೈನಿಕ ತಂತ್ರಗಳಲ್ಲದೇ, ನೊಂದವರಿಗೆ ಕ್ಷಿಪ್ರ ನೆರವು ನೀಡುವ ಧ್ಯೇಯದೊಂದಿಗೆ ಕಡಲ ಮಾಲಿನ್ಯ, ಪ್ರಕೋಪದ ಸಮಯದಲ್ಲಿ ಸ್ಥಳಾಂತರಕ್ಕೆ ನೆರವು, ಕಡಲ್ಗಳ್ಳರ ಮೇಲೆ ದಾಳಿಗಳು ಹಾಗೂ ಕಾನೂನುಗಳನ್ನು ಜಾರಿಗೊಳಿಸಲು ಸಹ ಜಂಟಿ ಅಭ್ಯಾಸಗಳನ್ನು ನಡೆಸಲಾಗಿದೆ.
ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಜಪಾನ್ ಕೂಡಾ ಅಧಿಕೃತ ಸಹಭಾಗಿ ದೇಶವಾಯಿತು. ತನ್ನ ತೀರಗಳನ್ನು ರಕ್ಷಿಸಿಕೊಳ್ಳುವಲ್ಲಿ ಪ್ರಮುಖ ದೇಶಗಳ ನೆರವಿನ ಮಹತ್ವವನ್ನು ಅದು ಮನಗಂಡಿದೆ. 2007 ರ ಮಲಬಾರ್ ಸಮರಾಭ್ಯಾಸವನ್ನು ಜಪಾನ್ ಪ್ರಾಯೋಜಿಸಿತ್ತು ಹಾಗೂ 2015ರಲ್ಲಿ ತ್ರಿಪಕ್ಷೀಯ ಪಾಲುದಾರ ದೇಶವಾಯಿತು. ಆಸ್ಟ್ರೇಲಿಯಾ ಕೂಡಾ ಯೋಜನೆಯಲ್ಲಿ ಪಾಲ್ಗೊಂಡಿದ್ದು, ಅಮೆರಿಕ-ಭಾರತ ನೌಕಾಪಡೆಗಳು ತನ್ನ ನೌಕಾಪಡೆಗೆ ಹೆಚ್ಚುವರಿ ರಕ್ಷಣೆ ಇದ್ದಂತೆ ಎಂದು ಅದು ಭಾವಿಸುತ್ತದೆ.
ಮಲಬಾರ್ ಸಮರಾಭ್ಯಾಸದಿಂದಾಗಿ ಭಾರತ, ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳೊಂದಿಗಿನ ಸೈನಿಕ ಸಂಬಂಧಗಳು ಬಲಗೊಂಡಿವೆ. ಹಿಂದು ಮಹಾಸಾಗರ-ಶಾಂತಸಾಗರ ಪ್ರದೇಶದಲ್ಲಿ ಭಾರತೀಯ ತಂತ್ರಗಳು ಹೇಗೆ ಪರಿಣಾಮಕಾರಿ ಎಂಬುದರ ಮೇಲೆ ಗಮನ ಕೇಂದ್ರೀಕರಿಸಲು ಅಮೆರಿಕದ ಸೈನ್ಯ ಪಡೆಯಲ್ಲಿ ಭಾರತ-ಶಾಂತಸಾಗರ ಸೈನ್ಯ ವಿಭಾಗವನ್ನು ಸ್ಥಾಪಿಸಲಾಗಿದೆ. ಈ ಪ್ರದೇಶವನ್ನು ರಕ್ಷಿಸುವ ಉದ್ದೇಶದಿಂದ ನೆರೆಹೊರೆಯ ದೇಶಗಳು ಸೈನ್ಯ ಸನ್ನದ್ಧವಾಗಬೇಕೆಂದು ಅಮೆರಿಕ ಬಯಸುತ್ತಿದ್ದು, ಈ ದೇಶಗಳನ್ನು ಬಲಪಡಿಸಲು ಬೇಕಾದ ತಂತ್ರಜ್ಞಾನಗಳನ್ನು ಒದಗಿಸಲೂ ಅದು ಸಿದ್ಧವಿದೆ. ಪರಿಣಾಮವಾಗಿ, ಭಾರತಕ್ಕೆ ಐಎನ್‌ಎಸ್ ಜಲಾಶ್ವ ಮತ್ತು ಪಿ-81 ಒದಗಿಸುವ ಒಪ್ಪಂದವನ್ನು ಮಾಡಿಕೊಳ್ಳಲಾಯಿತು.
ಪ್ರಬಲ ಶಕ್ತಿಯಾಗಿ ಹೊಮ್ಮುವ ಉತ್ಸಾಹದಲ್ಲಿರುವ ಚೀನಾ ದೇಶಕ್ಕೆ ಮಲಬಾರ್ ಸಮರಾಭ್ಯಾಸಗಳು ತೀವ್ರ ಕಿರಿಕಿರಿ ತಂದಿವೆ. ಹಿಂದು ಮಹಾಸಾಗರದ ಮೇಲೆ ಕಣ್ಣಿಟ್ಟಿರುವ ಚೀನಾಕ್ಕೆ ಈ ಜಂಟಿ ಸಮರಾಭ್ಯಾಸ ದೊಡ್ಡ ತಡೆಯಾಗಿ ಪರಿಣಮಿಸಿದೆ. ದೊಡ್ಡ ದೇಶವಾಗಿದ್ದರೂ ಚೀನಾದ ಕಡಲ ತೀರ ಬಲು ಸಣ್ಣದು. ತನ್ನ ನೌಕಾಪಡೆಗಳನ್ನು ಭಾರತಕ್ಕೆ ಹತ್ತಿರವಾಗಿ ಇರಿಸುವ ಉದ್ದೇಶದಿಂದ ಅದು ಶ್ರೀಲಂಕಾದ ಹಂಬನ್‌ಟೋಟಾ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದೆ. ಬಾಂಗ್ಲಾದೇಶ, ಮಯಾನ್ಮಾರ್, ಫಿಲಿಪ್ಪೀನ್ಸ್ ಮತ್ತು ಆಫ್ರಿಕಾದ ಸೈನ್ಯದ ಜೊತೆ ಸೌಹಾರ್ದಯುತ ಸಂಬಂಧಗಳನ್ನು ಹೊಂದಿದೆ. ಬಲೂಚಿಸ್ತಾನದ ಗ್ವಾಡರ್ ಬಂದರಿನ ನಿರ್ಮಾಣ ಹಾಗೂ ಚೀನಾ-ಪಾಕಿಸ್ತಾನ ಆರ್ಥಿಕ ರಹದಾರಿ (ಸಿಪಿಇಸಿ) ಸ್ಥಾಪನೆಯ ಮೂಲಕ ಅದು ಭಾರತವನ್ನು ಸದಾ ವಿರೋಧಿಸುವ ಪಾಕಿಸ್ತಾನದ ಮಿತ್ರ ದೇಶವಾಗಿ ಹೊಮ್ಮಿದೆ. ಬಲಿಷ್ಠ ರಾಷ್ಟ್ರವಾಗುವ ತನ್ನ ಕನಸುಗಳನ್ನು ಮಲಬಾರ್ ಮೂಲಕ ಅಮೆರಿಕ ಕೊಡವಿ ಹಾಕುತ್ತಿದೆ ಎಂಬುದು ಚೀನಾದ ಭಾವನೆ.
ಇಲ್ಲಿಯವರೆಗೆ, ಭಾರತವು ತನ್ನ ಮೂರೂ ಪಡೆಗಳ ಜಂಟಿ ಸಮರಾಭ್ಯಾಸವನ್ನು ರಷ್ಯದೊಂದಿಗೆ 'ಇಂದ್ರ' ಹೆಸರಿನಲ್ಲಿ ನಡೆಸಿತ್ತು. ಇದೇ ಮೊದಲ ಬಾರಿ ಮೂರೂ ಪಡೆಗಳ ಜಂಟಿ ಸಮರಾಭ್ಯಾಸವನ್ನು ಭಾರತ ಮತ್ತು ಅಮೆರಿಕ 'ಟೈಗರ್ ಟ್ರಯಂಫ್' (ವ್ಯಾಘ್ರ ವಿಜಯ) ಹೆಸರಿನಲ್ಲಿ ನಡೆಸುತ್ತಿವೆ. 2019ರ ನವೆಂಬರ್ 13ರಿಂದ 21ರವರೆಗೆ ನಡೆಯಲಿರುವ ಟೈಗರ್ ಟ್ರಯಂಫ್ ಜಂಟಿ ಸಮರಾಭ್ಯಾಸದಲ್ಲಿ ಭಾರತ ಮತ್ತು ಅಮೆರಿಕದ 1,200 ಸೈನಿಕರು ಪಾಲ್ಗೊಳ್ಳಲಿದ್ದಾರೆ. ಆಂಧ್ರಪ್ರದೇಶದ ಕಾಕಿನಾಡ ಮತ್ತು ವಿಶಾಖಪಟ್ಟಣದಲ್ಲಿ ಈ ಸಮರಾಭ್ಯಾಸ ನಡೆಯಲಿದೆ. ಇಲ್ಲಿಯವರೆಗೆ, ಮೂರೂ ಪಡೆಗಳು ಪ್ರತ್ಯೇಕವಾಗಿ ಸಮರಾಭ್ಯಾಸ ನಡೆಸಿದ್ದುಂಟು. ಆದರೆ, ಇದೇ ಮೊದಲ ಬಾರಿ, ಮೂರೂ ಪಡೆಗಳು ಜಂಟಿಯಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ, ಅಮೆರಿಕದೊಂದಿಗಿನ ಭಾರತದ ಸೈನಿಕ ಸಂಬಂಧಗಳಲ್ಲಿ ಇದು ಪ್ರಮುಖ ಮೈಲಿಗಲ್ಲು ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.