ಭೋಪಾಲ್ (ಮಧ್ಯಪ್ರದೇಶ): ವಸತಿ ಪ್ರದೇಶಗಳಿಗೆ ತೆರಳುವ ಪ್ರವೃತ್ತಿಯನ್ನು ಹೊಂದಿರುವ ಹುಲಿಯನ್ನು ಭೋಪಾಲ್ನ ವನ್ ವಿಹಾರ್ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಸರನ್' ಹೆಸರಿನ ಹುಲಿ ನೆರೆಯ ಮಹಾರಾಷ್ಟ್ರದ ವಸತಿ ಪ್ರದೇಶಕ್ಕೆ ದಾರಿ ತಪ್ಪಿ ಹೋದ ನಂತರ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ 2018ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಪಂಜರದಲ್ಲಿ ಕೂಡಿಹಾಕಲಾಗಿತ್ತು.
ಇದು 2018ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಕೊಂದಿತ್ತು ಎಂದು ವನ್ ವಿಹಾರ್ ರಾಷ್ಟ್ರೀಯ ಉದ್ಯಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಬೆತುಲ್ ಪಟ್ಟಣದ ಬಳಿಯ ವಸತಿ ಪ್ರದೇಶದಲ್ಲಿ ಇದನ್ನು ರಕ್ಷಿಸಲಾಗಿತ್ತು.
ಹುಲಿಯನ್ನು ಮಧ್ಯಪ್ರದೇಶದ ಸತ್ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡಲಾಗಿತ್ತು. ಆದರೆ ಮತ್ತೆ ಮತ್ತೆ ಜನವಸತಿ ಪ್ರದೇಶಗಳಿಗೆ ತೆರಳುತ್ತಿರುವುದರಿಂದ ಹುಲಿಯನ್ನು ವನ್ ವಿಹಾರ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದಿದ್ದಾರೆ.