ಅಹಮದಾಬಾದ್: ಗುಜರಾತ್‌ನ ಕಚ್ ಜಿಲ್ಲೆಯಲ್ಲಿ 14 ಗಂಟೆಗಳಲ್ಲಿ ಮೂರು ಬಾರಿ ಭೂಮಿ ಲಘುವಾಗಿ ಕಂಪಿಸಿದ ಅನುಭವವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಇದರಲ್ಲಿ ಎರಡು ಕಂಪನಗಳು ಸರಿ ಸುಮಾರು ಒಂದು ಗಂಟೆ ಅಂತರದಲ್ಲಿ ಭಾನುವಾರ ಸಂಭವಿಸಿದ್ದು, ಇನ್ನೊಂದು ಶನಿವಾರ ಸಂಜೆ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಆಸ್ತಿ ಹಾನಿ ಸಂಭವಿಸಿಲ್ಲ ಎಂದರು.
ಕಚ್ ಜಿಲ್ಲೆಯಲ್ಲಿ ಬೆಳಗ್ಗೆ 8.35 ಕ್ಕೆ ಸಂಭವಿಸಿದ ಭೂ ಕಂಪನದ ತೀವ್ರತೆ ಸುಮಾರು 3.3 ಇದ್ದು, ಭಚೌದಿಂದ ಈಶಾನ್ಯಕ್ಕೆ 11 ಕಿ.ಮೀ ದೂರದಲ್ಲಿ ಇದರ ಕೇಂದ್ರಬಿಂದುವಿತ್ತು ಎಂದು ಗಾಂಧಿನಗರ ಮೂಲದ ಇನ್ಸ್ಟಿಟ್ಯೂಟ್ ಆಫ್ ಸೀಸ್ಮಾಲಾಜಿಕಲ್ ರಿಸರ್ಚ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದು ಭೂಕಂಪನವು ಭಾನುವಾರ ಬೆಳಗ್ಗೆ 9.7 ಕ್ಕೆ ದಾಖಲಾಗಿದ್ದು, ಇದು 2.1 ತೀವ್ರತೆಯನ್ನು ಹೊಂದಿದ್ದು, 46 ಕಿಲೋಮೀಟರ್ ದೂರದ ಉತ್ತರ-ವಾಯುವ್ಯದ ಬೇಲಾದಲ್ಲಿ ಇದರ ಕೇಂದ್ರಬಿಂದುವಿತ್ತು.
ಹಾಗೆಯೇ ಕಚ್ ಜಿಲ್ಲೆಯ ರಾಪರ್ನಿಂದ ಆಗ್ನೇಯ ದಿಕ್ಕಿನಲ್ಲಿ 23 ಕಿ.ಮೀ ದೂರದಲ್ಲಿ ನಿನ್ನೆ(ಶನಿವಾರ) ಸಂಜೆ 7.24 ಕ್ಕೆ ಮೂರನೇ ಭೂಕಂಪನ ಸಂಭವಿಸಿದ್ದು, 3.0 ತೀವ್ರತೆ ದಾಖಲಾಗಿದೆ. ಈ ಭೂಕಂಪನದಿಂದ ಯಾವ ಪ್ರದೇಶದಲ್ಲಿಯೂ ಯಾವುದೇ ಆಸ್ತಿಯಾಗಲಿ, ಪ್ರಾಣ ಹಾನಿಯಾಗಲಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.