ಹೈದರಾಬಾದ್(ತೆಲಂಗಾಣ): ಇಂದು ಬೆಳ್ಳಂಬೆಳಗ್ಗೆ ವದ್ದೇರಿಗುಡಮ್ ಗ್ರಾಮದಿಂದ ಹೈದರಾಬಾದನತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು ಸಾವಿನ ಮನೆ ಸೇರಿರುವ ಘಟನೆ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಪವಾಡ ಸದೃಶ ರೀತಿಯಲ್ಲಿ ಗಂಡು ಮಗುವೊಂದು ಪ್ರಾಣಾಪಾಯದಿಂದ ಪಾರಾಗಿದೆ.
ಕಾರಿನಲ್ಲಿ ಡ್ರೈವರ್ ಹಾಗೂ ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ನೀರಿನ ಕಾಲುವೆಗೆ ಬಿದ್ದಿದೆ. ತಕ್ಷಣವೇ ಅಲ್ಲಿಗೆ ಆಗಮಿಸಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಸ್ಥಳದಲ್ಲೇ ಪತಿ ರಂಗಯ್ಯ, ಆತನ ಪತ್ನಿ ಅಲ್ವೇಲು ಹಾಗೂ ಮಗಳು ಕೀರ್ತಿ ಸಾವನ್ನಪ್ಪಿದ್ದಾರೆ. ಆದರೆ ಅವರ ಮಗ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಇಂದು ಬೆಳಗಿನಜಾವ ಡೊಗ್ಲಯಾ ಹಳ್ಳಿ ಬಳಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಕಳೆದ ಫೆ.21ರಂದು ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಆ ಘಟನೆ ಮರೆಯುವ ಮುನ್ನವೇ ತೆಲಂಗಾಣದಲ್ಲಿ ಮತ್ತೊಂದು ದುರಂತ ಸಂಭವಿಸಿದೆ.