ಪಾಲಕ್ಕಾಡ್ : ( ಕೇರಳ) ಜಿಲ್ಲೆಯ ವಲಯಾರ್ನಲ್ಲಿ ಎರಡು ದಿನದೊಳಗೆ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸಾವಿನ ಹಿಂದೆ ಕಳ್ಳಭಟ್ಟಿಯ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಯ ಆದಿವಾಸಿ ಪ್ರದೇಶವಾದ ವಲಯಾರ್ ಪಯ್ಯತ್ತುಕಾಡ್ ನಿವಾಸಿಗಳಾದ ರಾಮನ್ , ಅಯ್ಯಪ್ಪನ್ ಮತ್ತು ಶಿವನ್ ಮೃತರು. ಇವರಲ್ಲಿ ಇಬ್ಬರು ಭಾನುವಾರ ಮೃತಪಟ್ಟರೆ, ಓರ್ವ ಸೋಮವಾರ ಮೃತಪಟ್ಟಿದ್ದಾನೆ. ಕಳ್ಳಭಟ್ಟಿ ಸೇವಿಸಿ ಮೂವರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಭಾನುವಾರ ಮೃತಪಟ್ಟ ಇಬ್ಬರ ಮೃತದೇಹಗಳ ಅಂತ್ಯ ಸಂಸ್ಕಾರ ಮಾಡಲಾಗಿದೆ. ಸೋಮವಾರ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮೂವರು ಕಳ್ಳಭಟ್ಟಿ ಸೇವಿಸಿ ಮೃತಪಟ್ಟಿದ್ದಾರ ಎಂಬುವುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಗೊತ್ತಾಗಲಿದೆ.
ಮೃತದೇಹಗಳು ಪತ್ತೆಯಾದ ಸ್ಥಳದಲ್ಲಿ ಸ್ಯಾನಿಟೈಸರ್ ವಾಸನೆ ಬಂದಿದೆ ಮತ್ತು ಸಾಬೂನು ಪತ್ತೆಯಾಗಿದೆ. ಮೇಲ್ನೋಟಕ್ಕೆ ಸ್ಯಾನಿಟೈಸರ್ ಸೇವಿಸಿ ಮೃತಪಟ್ಟಿರುವ ಶಂಕೆಯಿದೆ. ನಮಗೆ ಪರಿಸರದಲ್ಲಿ ಯಾವುದೇ ನಕಲಿ ಮದ್ಯದಂಗಡಿ ಪತ್ತೆಯಾಗಿಲ್ಲ. ಅನಧಿಕೃತ ಮದ್ಯದಂಗಡಿ ಪತ್ತೆಯಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಡಿವೈಎಸ್ಪಿ ಪಿ. ಸಾಯಿಕುಮಾರ್ ತಿಳಿಸಿದ್ದಾರೆ.