ನವದೆಹಲಿ: ಬುದ್ಧ ಪೂರ್ಣಿಮೆಯ ಹಿನ್ನೆಲೆಯಲ್ಲಿ ಆಯೋಜನೆಗೊಂಡಿದ್ದ ವೇಸಕ್ ಗ್ಲೋಬಲ್ ಸೆಲಬ್ರೇಷನ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದರು.
ನಮ್ಮ ಕೆಲಸದಲ್ಲಿ ಸೇವಾ ಮನೋಭಾವ ಅಗತ್ಯ. ವಿದೇಶದಲ್ಲಿರುವವರನ್ನು ಸ್ವದೇಶಕ್ಕೆ ಕರೆತರಲಾಗುತ್ತಿದೆ. ಎಲ್ಲರೂ ಸಂಕಲ್ಪ ತೊಟ್ಟು ಹೋರಾಟ ನಡೆಸೋಣ. ಇದರಲ್ಲಿ ಯಾವುದೇ ಬೇಧಬಾವ ಇಲ್ಲದೇ ಸಹಾಯ ಮಾಡೋಣ ಎಂದು ಪ್ರಧಾನಿ ಕರೆ ಕೊಟ್ಟರು.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಭಾರತ ಸ್ವಾರ್ಥವಿಲ್ಲದೆ ವಿಶ್ವದ ಜತೆಗೆ ನಿಂತಿದೆ. ಭಾರತ ಈಗಾಗಲೇ ಹಲವು ರಾಷ್ಟ್ರಗಳಿಗೆ ಸಹಾಯ ಹಸ್ತ ಚಾಚಿದೆ. ಅಮೆರಿಕ ಸೇರಿ ಅನೇಕ ರಾಷ್ಟ್ರಗಳಿಗೆ ಔಷಧ ರಫ್ತು ಮಾಡಿದ್ದೇವೆ. ಸಹಾಯ ಕೇಳಿ ನಮ್ಮ ಬಳಿ ಬಂದ ಎಲ್ಲರಿಗೂ ಸಹಾಯ ಮಾಡಿದ್ದೇವೆ. ಇದು ಮುಂದುವರಿಯಲಿದೆ. ಕಷ್ಟದ ಸಮಯದಲ್ಲಿ ಭಗವಾನ್ ಬುದ್ಧನ ತತ್ವ, ಸಂದೇಶ ಹಾಗೂ ಬೋಧನೆ ಪ್ರಸ್ತುತವಾಗಿದ್ದು, ಯಾವುದೇ ಧರ್ಮ, ಭಾಷೆ, ದೇಶ ಎಂದು ತಾರತಮ್ಯ ನೋಡದೆ ಎಲ್ಲರಿಗೂ ಸಹಾಯ ಮಾಡಿದ್ದೇವೆ. ವಿಶ್ವದ ಅಭಿವೃದ್ಧಿಗಾಗಿ ನಮ್ಮ ಬೆಂಬಲ ಸದಾ ಮುಂದುವರಿಯಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಕೊರೊನಾ ವಿರುದ್ಧ ನಮ್ಮ ದೇಶದ ವಾರಿಯರ್ಸ್ ದಿನದ 24 ಗಂಟೆ ಕೆಲಸ ಮಾಡುತ್ತಿದ್ದು, ಅವರೆಲ್ಲರೂ ಈ ಸಮಯದಲ್ಲಿ ಅಭಿನಂದನೆಗೆ ಅರ್ಹರು ಎಂದರು.