ವಾರಾಣಸಿ: ದೇಶದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತದಲ್ಲಿ ಶೇ. 25ರಷ್ಟು ಬೈಕ್ ಸವಾರರೇ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆ ಅಪಘಾತ ಪ್ರಮಾಣ ಕಡಿಮೆ ಮಾಡಲು ವಾರಣಾಸಿಯ ವಿದ್ಯಾರ್ಥಿಗಳು ನೂತನವಾಗಿ ‘ಸ್ಮಾರ್ಟ್ ಸೇಫ್ಟಿ ಹೆಲ್ಮೆಟ್’ ಸಿದ್ಧಪಡಿಸಿದ್ದಾರೆ. ಈ ಸ್ಮಾರ್ಟ್ ಹೆಲ್ಮೆಟ್ನ ವಿಶೇಷ ಅಂದರೆ ಇದನ್ನು ಧರಿಸುವವರೆಗೂ ಬೈಕ್ ಸ್ಟಾರ್ಟ್ ಆಗುವುದೇ ಇಲ್ಲ.
ಭಾರತದಲ್ಲಿ ಪ್ರತಿ ಗಂಟೆಗೆ ನಾಲ್ವರು ಹೆಲ್ಮೆಟ್ ಧರಿಸದೇ ರಸ್ತೆ ಅಪಘಾತದಲ್ಲಿ ಸಾವನಪ್ಪುತ್ತಿದ್ದಾರೆ. ಭವಿಷ್ಯದಲ್ಲಿ ಈ ರೀತಿಯ ಅವಘಡಗಳು ಸಂಭವಿಸಬಾರದೆಂಬ ಉದ್ದೇಶದಿಂದ ವಾರಾಣಸಿಯ ಬಿ ಟೆಕ್ ವಿದ್ಯಾರ್ಥಿಗಳು ವಿನೂತನ ಹೆಲ್ಮೆಟ್ ಆವಿಷ್ಕರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಿ ಟೆಕ್ ವಿದ್ಯಾರ್ಥಿ ಅನೀಶ್ ಕುಮಾರ್ ಪಟೇಲ್, ಬೈಕ್ನ ಎಂಜಿನ್ಗೆ ಟ್ರಾನ್ಸ್ಮೀಟರ್ ಅಳವಡಿಸಲಾಗಿದ್ದು, ಸವಾರ ಹೆಲ್ಮೆಟ್ ಧರಿಸದೇ ಹೋದರೆ ಬೈಕ್ ಸ್ಟಾರ್ಟ್ ಆಗುವುದಿಲ್ಲ. ಬೈಕ್ನ ಎಂಜಿನ್ಗೂ ಹಾಗೂ ಹೆಲ್ಮೆಟ್ನ ರಿಸೀವರ್ಗೂ ಬ್ಲೂಟೂತ್ ಸಂಪರ್ಕವಿದ್ದು, ಸವಾರ ಹೆಲ್ಮೆಟ್ ಧರಿಸಿರುವುದು ಸೆನ್ಸಾರ್ ಮೂಲಕ ತಿಳಿಯುವವರೆಗೂ ಬೈಕ್ ಸ್ಟಾರ್ಟ್ ಆಗುವುದಿಲ್ಲ.
ಬೈಕ್ ಸವಾರರು ಈ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡಿದರೆ ರಸ್ತೆ ಅಪಘಾತಗಳಿಂದ ಪಾರಾಗಬಹುದು. ಇನ್ನೂ ಈ ಹೆಲ್ಮೆಟ್ಗೆ 500 ರೂಪಾಯಿ ನಿಗದಿ ಮಾಡಲಾಗಿದೆ. ಇದಲ್ಲದೇ ಈ ಸ್ಮಾರ್ಟ್ ಹೆಲ್ಮೆಟ್ ವಾಹನದ ಸುರಕ್ಷತೆಯ ಕುರಿತಾಗಿ ಮತ್ತು ವೈಬ್ರೆಷನ್ ಸೆನ್ಸಾರ್ನಿಂದ ಅಪಘಾತದ ತೀವ್ರತೆಯ ಕುರಿತು ಜಿಪಿಎಸ್ ಮತ್ತು ಸಿಮ್ ಮೂಲಕ ತುರ್ತು ಸಂದೇಶ ನೀಡಲಿದೆ ಎಂದಿದ್ದಾರೆ.
ಇನ್ನೂ ವಿದ್ಯಾರ್ಥಿಗಳ ಈ ಆವಿಷ್ಕಾರದ ಕುರಿತು ಮಾತನಾಡಿದ ಎಸ್ಪಿ (ಟ್ರಾಫಿಕ್) ಶ್ರವಣ್ ಸಿಂಗ್, ಸುರಕ್ಷತೆಯ ದೃಷ್ಠಿಯಿಂದ ಹೆಲ್ಮೆಟ್ ಬಹಳ ಅವಶ್ಯಕ. ಇಂತಹ ಸಾಧನವನ್ನು ಆವಿಷ್ಕರಿಸಿದ ವಿದ್ಯಾರ್ಥಿಗಳ ಪ್ರಯತ್ನವನ್ನು ನಾನು ಪ್ರಶಂಸಿಸುತ್ತೇನೆ ಎಂದಿದ್ದಾರೆ.
ವಾಹನ ಸವಾರರ ಸುರಕ್ಷತೆಯ ಆಧ್ಯತೆಯ ಮೇರೆಗೆ ಸರ್ಕಾರ ಆರಂಭಿಸಿದ ಹಲವು ಕ್ರಮಗಳು ವಿಫಲವಾಗಿವೆ. ಪ್ರಮುಖವಾಗಿ ಹೆಲ್ಮೆಟ್ ಧರಿಸದ ಕಾರಣದಿಂದ ರಸ್ತೆ ಅಪಘಾತದಲ್ಲಿ ಸಾವನಪ್ಪುತ್ತಿದ್ದ ಪ್ರಕರಣಗಳನ್ನು ಈ ಸಾಧನದ ಸಹಾಯದಿಂದ ತಪ್ಪಿಸಬಹುದು ಎಂದು ಎಸ್ಪಿ ಶ್ರವಣ್ ಹೇಳಿದ್ದಾರೆ.