ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರು ಮತ್ತೊಂದು ದಾಳಿಗೆ ಸಜ್ಜಾಗಿದ್ದು, ಪುಲ್ವಾಮಾ ಮಾದರಿಯಲ್ಲಿ ಅಟ್ಯಾಕ್ ನಡೆಯಲಿದೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ.
ಗುಪ್ತಚರ ಮೂಲದ ಮಾಹಿತಿ ಪ್ರಕಾರ ಈ ಬಾರಿಯ ದಾಳಿಗೆ ಉಗ್ರರು ಬೈಕನ್ನು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಫೆ.14ರಂದು ನಡೆದ ಭೀಕರ ಉಗ್ರದಾಳಿಗೆ ಕಾರನ್ನು ಬಳಕೆ ಮಾಡಲಾಗಿತ್ತು.
ಪ್ರಸ್ತುತ ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಇದನ್ನೇ ಗುರಿಯಾಗಿಸಿ ಉಗ್ರರು ದಾಳಿ ನಡೆಸಲಿದ್ದಾರೆ ಎನ್ನುವ ಮಾಹಿತಿ ಈಗಾಗಲೇ ಗುಪ್ತಚರ ಇಲಾಖೆ ನೀಡಿತ್ತು.
ಸದ್ಯ ಬೈಕ್ ಬಳಸಿ ಭಾರತೀಯ ಸೇನೆಯ ಮೇಲೆ ಭಯೋತ್ಪಾದಕರು ಅಟ್ಯಾಕ್ ನಡೆಸಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೋಧರ ವಾಹನದ ಮೇಲೆ ರಿಮೋಟ್ ಕಂಟ್ರೋಲ್ ಬಳಸಿ ದಾಳಿ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.