ನವದೆಹಲಿ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಅಲ್ಪ ಇಳಿಕೆಯಾಗಿದ್ರೂ, ಕೇಂದ್ರ ಆರೋಗ್ಯ ಸಚಿವಾಲಯಕ್ಕೆ 10 ರಾಜ್ಯಗಳದ್ದೇ ಚಿಂತೆಯಾಗಿದೆ. ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಶೇಕಡಾ 78 ರಷ್ಟು ಸಾವಿನ ಪ್ರಮಾಣ ದಾಖಲಾಗಿದ್ದು, ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಇಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್‌ನಿಂದಾಗಿ 180 ಮಂದಿ ಮೃತಪಟ್ಟಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 776 ಮಂದಿ ಸೋಂಕಿಗೆ ಕೊನೆಯಿಸಿರೆಳೆದಿದ್ದಾರೆ. ಇದರಲ್ಲಿ ಶೇಕಡಾ 78 ರಷ್ಟು 10 ರಾಜ್ಯಗಳ ಪಾಲಿದೆ. ತಮಿಳುನಾಡಿನಲ್ಲಿ 70, ಕರ್ನಾಟಕ-59, ಉತ್ತರಪ್ರದೇಶ 58, ಪಶ್ಚಿಮ ಬಂಗಾಳ 56, ಪಂಜಾಬ್ 46, ಆಂಧ್ರ ಪ್ರದೇಶ 37, ದೆಹಲಿ 37, ಮಧ್ಯಪ್ರದೇಶ 35 ಹಾಗೂ ಚತ್ತೀಸ್‌ಗಢದಲ್ಲಿ 29 ಮಂದಿ ಮೃತಪಟ್ಟಿದ್ದಾರೆ.
ಹೊಸದಾಗಿ 70,589 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಶೇ.73ರಷ್ಟು 19 ರಾಜ್ಯಗಳ ಪಾಲಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 11,921 ಮಂದಿಗೆ ಕಳೆದ 24 ಗಂಟೆಗಳಲ್ಲಿ ಸೋಂಕು ತಗುಲಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ 6,892, ತಮಿಳುನಾಡು 5,589, ಆಂಧ್ರಪ್ರದೇಶ 5,847, ಕೇರಳ 4,538, ಉತ್ತರಪ್ರದೇಶ 3,790, ಚತ್ತೀಸ್‌ಗಢ 3,725, ಅಸ್ಸೋಂ 3,644, ಒಡಿಶಾ 3,235 ಹಾಗೂ ಪಶ್ಚಿಮ ಬಂಗಾಳದಲ್ಲಿ 3,155 ಪ್ರಕರಣಗಳು ದಾಖಲಾಗಿವೆ.
ಭಾರತದಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಕೂಡ ಏರುಗತಿಯಲ್ಲಿದ್ದು, ಶೇ.83 ರಷ್ಟು ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 84,877 ಮಂದಿ ಕೊರೊನಾನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 51,01,397ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರ, ಕರ್ನಾಟಕ, ಆಂಧ್ರ, ತಮಿಳುನಾಡು, ಉತ್ತರಪ್ರದೇಶ, ದೆಹಲಿ, ಒಡಿಶಾ, ಕೇರಳ, ಬಂಗಾಳ ಮತ್ತು ಮಧ್ಯಪ್ರದೇಶದಲ್ಲಿ ಶೇಕಡಾ 73 ರಷ್ಟು ಸೋಂಕಿತರು ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 20 ಸಾವಿರ ಜನ ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ 7,000 ಮಂದಿ ಚೇತರಿಸಿಕೊಂಡಿದ್ದಾರೆ.