ಹೈದರಾಬಾದ್: ಮಕ್ಕಳನ್ನು ರಕ್ಷಿಸಲು ಹೋಗಿ ಮಹಿಳೆಯೊಬ್ಬಳು ಹೊಳೆಯಲ್ಲಿ ಕೊಚ್ಚಿ ಹೋಗಿರುವ ಘಟನೆ ವಿಕರಾಬಾದ್ ಜಿಲ್ಲೆಯ ಶಹಪುರ್ ತಾಂಡಾದಲ್ಲಿ ನಡೆದಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, 35 ವರ್ಷದ ಅನಿತಾ ಬಾಯಿ ಎಂಬ ಮಹಿಳೆ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಈಕೆ ಪತಿ ದಶರಥ್ ಮತ್ತು ಮಕ್ಕಳೊಂದಿಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ.
ಪತಿ ದಶರಥ್ ಮೂವರು ಮಕ್ಕಳೊಂದಿಗೆ ಮೊದಲು ಹೊಳೆ ದಾಟಿದ್ದರೆ, ಅನಿತಾ ಬಾಯಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹಿಂದಿನಿಂದ ಬರುತ್ತಿದ್ದರು. ಈ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ತಕ್ಷಣ ಧಾವಿಸಿದ ದಶರಥ್, ಮಕ್ಕಳನ್ನು ರಕ್ಷಿಸಿದ್ದಾರೆ. ಆದರೆ, ಪತ್ನಿಯನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಬಳಿಕ ಸ್ಥಳೀಯರು ಮಹಿಳೆಯ ಮೃತದೇಹ ಹೊರ ತೆಗೆದಿದ್ದಾರೆ.
ಮತ್ತೊಂದು ಘಟನೆಯಲ್ಲಿ, ನಗರ ಕರ್ನೂಲ್ ಜಿಲ್ಲೆಯ ಸಿದ್ದಾಪುರ ಗ್ರಾಮದಲ್ಲಿ ದಂಪತಿ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರೊಂದಿಗೆ ಮಾತನಾಡಿದ ಸ್ಥಳೀಯ ಶಾಸಕ ಜಿ.ಬಾಲರಾಜು, ದಂಪತಿಯ ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಕತ್ತಲೆಯಾದ್ದರಿಂದ ಕಾಫ್ಟರ್ ಬರಲು ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಗ್ರಾಮಕ್ಕೆ ತಲುಪಿದ್ದು, ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.
ವಾಯುಭಾರ ಕುಸಿತದಿಂದ ತೆಲಂಗಾಣದ ಕೆಲ ಭಾಗಗಳಲ್ಲಿ ಬುಧವಾರ ಭಾರೀ ಮಳೆಯಾಗಿದೆ. ಅನೇಕ ಕಡೆಗಳಲ್ಲಿ ನದಿ, ಸರೋವರಗಳು ತುಂಬಿ ಹರಿಯುತ್ತಿವೆ. ಸಂಗರೆಡ್ಡಿ ಜಿಲ್ಲೆಯ ಜಹೀರಾಬಾದ್‌ನಲ್ಲಿ ಅತಿ ಹೆಚ್ಚು 13 ಸೆಂ.ಮೀ. ಮತ್ತು ರಂಗಾರೆಡ್ಡಿ, ಹೈದರಾಬಾದ್, ಮೇಡ್ಚಲ್ ಮಲ್ಕಜಗಿರಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ 10 ಸೆಂ.ಮೀ. ಮಳೆಯಾಗಿದೆ.