ಹೈದರಾಬಾದ್(ತೆಲಂಗಾಣ): ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಬುಧವಾರ ಮಾತನಾಡಿ, ಕೊರೊನಾ ಎದುರಿಸಲು ರಾಜ್ಯವು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಒಂದು ಲಕ್ಷ ಕೋವಿಡ್-19 ರೋಗಿಗಳನ್ನು ಸಹ ನಿರ್ವಹಿಸಲು ಸಮರ್ಪಕವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಸೋಂಕು ಶಂಕೆಯಿದ್ದ ವ್ಯಕ್ತಿಗಳ ಪರೀಕ್ಷೆ ನಡೆಸಲು ಮತ್ತು ಕೊರೊನಾ ವೈರಸ್ ಸೋಂಕಿಗೆ ಒಳಗಾದವರಿಗೆ ಚಿಕಿತ್ಸೆ ನೀಡಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದರು.
ರಾಜ್ಯವು ಯಾವುದೇ ಸಂಖ್ಯೆಯ ಜನರ ಮೇಲೆ ಪರೀಕ್ಷೆಗಳನ್ನು ನಡೆಸಲು ಸಾಕಷ್ಟು ಪರೀಕ್ಷಾ ಕಿಟ್‌ಗಳನ್ನು ಹೊಂದಿದೆ. ಜೊತೆಗೆ, ವೈಯಕ್ತಿಕ ಸಂರಕ್ಷಣಾ ಸಲಕರಣೆಗಳ(ಪಿಪಿಇ) ಕಿಟ್‌ಗಳ ಕೊರತೆಯೂ ಇಲ್ಲ ಎಂದು ಅವರು ಮಾಹಿತಿ ನೀಡಿದರು.
"ನಮ್ಮಲ್ಲಿ 2.25 ಲಕ್ಷ ಪಿಪಿಇ ಕಿಟ್‌ಗಳಿವೆ. ಇನ್ನೂ 5 ಲಕ್ಷ ಕಿಟ್‌ಗಳಿಗೆ ನಾವು ಆರ್ಡರ್ ಮಾಡಿದ್ದು, ಶೀಘ್ರದಲ್ಲೇ ಲಭಿಸಲಿದೆ. ಇನ್ನೂ, 3.25 ಲಕ್ಷ ಎನ್ 95 ಮುಖವಾಡಗಳಿವೆ. ಶೀಘ್ರದಲ್ಲೇ ಈ ಸಂಖ್ಯೆಯೂ 5 ಲಕ್ಷಕ್ಕೆ ಏರಿಕೆಯಾಗಲಿದೆ. ಇದಲ್ಲದೇ, ವೆಂಟಿಲೇಟರ್‌ಗಳು, ಇತರ ವೈದ್ಯಕೀಯ ಉಪಕರಣಗಳು, ವೈದ್ಯರ ಸಂಖ್ಯೆ, ಇತರ ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆಗಳು, ಹಾಗೂ 20,000 ಹಾಸಿಗೆಗಳು ಸಿದ್ಧವಾಗಿವೆ. ರೋಗಿಗಳ ಸಂಖ್ಯೆ ಒಂದು ಲಕ್ಷಕ್ಕೆ ಏರಿದರೂ ನಿಶ್ಚಿಂತೆಯಿಂದ ನಿರ್ವಹಿಸಲು ಸಹಕಾರಿಯಾಗುವಂತೆ ಸರ್ಕಾರ ಎಲ್ಲವನ್ನೂ ಮಾಡಿದೆ "ಎಂದು ಸಿಎಂ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಆಸ್ಪತ್ರೆಗಳಲ್ಲಿ 514 ಸಕ್ರಿಯ ಪ್ರಕರಣಗಳಿವೆ. ಎಂಟು ರೋಗಿಗಳನ್ನು ಬುಧವಾರ ಬಿಡುಗಡೆ ಮಾಡಲಾಗಿದ್ದು, ಇನ್ನೂ 128 ರೋಗಿಗಳನ್ನು ಗುರುವಾರ ಬಿಡುಗಡೆ ಮಾಡಲಾಗುವುದು ಎಂದು ವೈದ್ಯಕೀಯ ಮತ್ತು ಆರೋಗ್ಯ ಸಚಿವ ಇಟಾಲಾ ರಾಜೇಂದರ್ ತಿಳಿಸಿದ್ದಾರೆ.