ಹೈದರಾಬಾದ್: ಆಗಸ್ಟ್ ತಿಂಗಳಲ್ಲಿ 1.10 ಕೋಟಿ ರೂ.ಗಳ ಲಂಚ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ತೆಲಂಗಾಣ ಸರ್ಕಾರಿ ಅಧಿಕಾರಿಯೊಬ್ಬರು ಇಲ್ಲಿನ ಕೇಂದ್ರ ಕಾರಾಗೃಹ ಚಂಚಲಗುಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಕೀಸರಾದ ಮಾಜಿ ತಹಶೀಲ್ದಾರ್ ಎರ್ವಾ ಬಲರಾಜು ನಾಗರಾಜು ಎಂಬವರು ತಮ್ಮ ಜೈಲು ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಅವರ ಮೃತದೇಹವನ್ನು ಶವಪರೀಕ್ಷೆಗಾಗಿ ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ದಬೀರ್‌ಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಆಗಸ್ಟ್ 14 ರಂದು ರಿಯಲ್ ಎಸ್ಟೇಟ್ ವ್ಯಾಪಾರಿಗಳಿಂದ ಲಂಚ ಪಡೆದಿದ್ದಕ್ಕಾಗಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಾಗರಾಜು ಅವರನ್ನು ಬಂಧಿಸಿದ್ದರು.