ಹೈದರಾಬಾದ್: 112 ಎಕರೆ ಜಮೀನಿಗೆ ನೋ ಅಬ್ಜಕ್ಷನ್ ಸರ್ಟಿಫಿಕೇಟ್ ನೀಡಲು ಬರೋಬ್ಬರಿ 1.12 ಕೋಟಿ ರೂ ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಸರ್ಕಾರಿ ಅಧಿಕಾರಿಯೋರ್ವ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ. ಮೇಡಕ್ ಜಿಲ್ಲೆಯ ಹೆಚ್ಚುವರಿ ಕಲೆಕ್ಟರ್ ಗಡ್ಡಮ್ ನಾಗೇಶ್ ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, ಚೆಪ್ಪಲೂರ್ತಿ ಗ್ರಾಮದಲ್ಲಿ 112 ಎಕರೆ ಜಮೀನಿಗೆ ಸಂಬಂಧಿಸಿದಂತೆ ನೋ ಅಬ್ಜಕ್ಷನ್ ಸರ್ಟಿಫಿಕೆಟ್ ನೀಡಲು ಲಂಚ ಪಡೆದುಕೊಳ್ಳುತ್ತಿದ್ದರು. 1 ಎಕರೆಗೆ 1 ಲಕ್ಷ ರೂಪಾಯಿಯಂತೆ ಒಟ್ಟು 112 ಎಕರೆ ಜಮೀನಿಗೆ 1.12 ಕೋಟಿ ರೂ ಪಡೆದುಕೊಳ್ಳಲು ಮುಂದಾಗಿದ್ದರು. ಇದರಲ್ಲಿ 40 ಲಕ್ಷ ರೂ ಹಣದ ರೂಪದಲ್ಲಿ ಹಾಗೂ 72 ಲಕ್ಷ ರೂ 5 ಎಕರೆ ಜಮೀನಿನ ರೂಪದಲ್ಲಿ ಪಡೆದುಕೊಳ್ಳಲು ಅವರು ಬೇಡಿಕೆಯಿಟ್ಟಿದ್ದರು.
ರೈತರು ಅಧಿಕಾರಿ ಜತೆ ನಡೆಸಿರುವ ಸಂಭಾಷಣೆ ರೆಕಾರ್ಡ್ ಮಾಡಿಕೊಂಡು ಎಸಿಬಿ ದಾಳಿ ನಡೆಸಿದ್ದು, ಈ ವೇಳೆ 40 ಲಕ್ಷ ರೂ ನಗದು ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ ಅವರ ನಿವಾಸ ಸೇರಿದಂತೆ ವಿವಿಧ 11 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.