ಹೈದರಾಬಾದ್(ತೆಲಂಗಾಣ): ಲಾಕ್‌ಡೌನ್‌ಗೆ ಇನ್ನೂ ಕೆಲವು ದಿನಗಳವರೆಗೆ ಜನರು ಬೆಂಬಲ ನೀಡಿದರೆ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ ಎನ್ನುವ ಮೂಲಕ ಲಾಕ್‌ಡೌನ್‌ನ ಮತ್ತೊಂದು ವಿಸ್ತರಣೆಯ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸುಳಿವು ನೀಡಿದರು.
ಲಾಕ್‌ಡೌನ್ ಅನುಷ್ಠಾನ, ಕೊರೊನಾ ವೈರಸ್ ಹರಡುವಿಕೆ ಮತ್ತು ಇತರ ವಿಷಯಗಳ ಬಗ್ಗೆ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಮುಖ್ಯಮಂತ್ರಿ ಭಾನುವಾರ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರಿಂದ ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವಿಕೆಯು ಕ್ಷೀಣಿಸುತ್ತಿದೆ ಎಂದು ಸಮಾಧಾನ ವ್ಯಕ್ತಪಡಿಸಿದರು, ಜನರು ಇನ್ನೂ ಕೆಲವು ದಿನಗಳವರೆಗೆ ಲಾಕ್‌ಡೌನ್‌ಗೆ ಬೆಂಬಲ ನೀಡಿದರೆ ಮತ್ತು ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಅನುಸರಿಸಿದರೆ, ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಮೇ 3 ರವರೆಗೆ ಲಾಕ್‌ಡೌನ್ ಜಾರಿಯಲ್ಲಿರಲಿದ್ದು, ತೆಲಂಗಾಣದಲ್ಲಿ ಮೇ 7 ರವರೆಗೂ ಲಾಕ್‌ಡೌನ್ ವಿಸ್ತರಿಸಲಾಗಿದೆ ಎಂದು ಸ್ಪಷ್ಟಪಡಿಸಿದ ಕೆಸಿಆರ್, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿಗಳೊಂದಿಗೆ ಸಂವಹನ ನಡೆಸಿದ ನಂತರ ದೇಶದ ಪರಿಸ್ಥಿತಿ ಸ್ಪಷ್ಟವಾಗುತ್ತದೆ. ಜೊತೆಗೆ ದೇಶ, ರಾಜ್ಯಗಳು ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಹೇಳಿದರು.