ಪುಣೆ(ಮಹಾರಾಷ್ಟ್ರ): ಭಾರತದಲ್ಲಿ ಹೆಸರಾಂತ ಕಂಪನಿಗಳಲ್ಲೊಂದಾದ ಟೆಕ್ ಮಹೀಂದ್ರಾದ ಮೇಕರ್ಸ್ ಲ್ಯಾಬ್ ವತಿಯಿಂದ ತಂತ್ರಜ್ಞಾನದ ಮೂಲಕ ನೈಜ ಜಗತ್ತಿನ ಸವಾಲುಗಳನ್ನು ಪರಿಹರಿಸಲು, ಅದರಲ್ಲೂ ವಿಶೇಷವಾಗಿ ರಕ್ಷಣಾ ವಿಭಾಗದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು, ವುಮೆನ್-ಲೆಡ್-ಐಡಿಯಥಾನ್ (ಮಹಿಳೆಯರ ನೇತೃತ್ವದಲ್ಲಿ ವಿಚಾರ ವಿನಿಮಯ) ಕಾರ್ಯಕ್ರಮಮವನ್ನು ಪ್ರಾರಂಭಿಸಿದ್ದಾರೆ.
ಈ ಕಾರ್ಯಕ್ರಮವನ್ನು ವಿಶ್ವ ಮಹಿಳಾ ದಿನಾಚರಣೆಯಾದ ಮಾ.8ರಂದು ಟೆಕ್ ಮಹೀಂದ್ರಾ, ಮೇಕರ್ಸ್ ಲ್ಯಾಬ್‌ನ ಗ್ಲೋಬಲ್ ಹೆಡ್ ನಿಖಿಲ್ ಮಲ್ಹೋತ್ರಾ ಪ್ರಾರಂಭಿಸಿದರು. ಈ ಕಾರ್ಯಕ್ರಮ ನಾಲ್ಕು ವಾರಗಳವರೆಗೆ ಜರುಗಲಿದ್ದು, ಏಪ್ರಿಲ್ 7ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ನಿಖಿಲ್ ಮಲ್ಹೋತ್ರಾ, ಟೆಕ್ ಮಹೀಂದ್ರಾ ವಿಭಾಗವಾದ ಮೇಕರ್ಸ್ ಲ್ಯಾಬ್‌ನ ಉದ್ದೇಶವು, ತಂತ್ರಜ್ಞಾನದ ಆವಿಷ್ಕಾರವನ್ನು ಉತ್ತೇಜಿಸುವುದು ಮತ್ತು ಹೊರ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಅಕಾಡೆಮಿ ಮತ್ತು ಉದ್ಯಮಗಳು ಒಟ್ಟಾಗಿ ಸೇರಬಹುದಾದ ಸಾಮಾನ್ಯ ವೇದಿಕೆಯನ್ನು ಒದಗಿಸುವುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕಾರ್ಯಕ್ರಮವನ್ನು ಆಯೋಜಿಸಲು ಬಹಳ ಹಿಂದೆಯೇ ಯೋಚಿಸಲಾಗಿತ್ತು, ಆದರೆ, ಸಾಧ್ಯವಾಗಿರಲಿಲ್ಲ. ಇದೀಗ ಮಹಿಳೆಯರ ನೇತೃತ್ವದಲ್ಲಿ ಐಡಿಯಾಥಾನ್ ಮತ್ತು ಹ್ಯಾಕಥಾನ್( ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಪ್ಯೂಟರ್ ಪ್ರೋಗ್ರಾಂಮಿಂಗ್ ಮೂಲಕ ತೊಡಗಿಕೊಳ್ಳುವುದು) ಆಯೋಜಿಸಿದ್ದು, ಇದು ವಿಶೇಷವಾಗಿ ಮಹಿಳಾ ವೃತ್ತಿಪರರನ್ನು ಸಮಾಜ ಮತ್ತು ಪ್ರಪಂಚದ ಸುಧಾರಣೆಯತ್ತ ತಂತ್ರಜ್ಞಾನವನ್ನು ನವೀನಗೊಳಿಸಲು ಹಾಗೂ ಹತೋಟಿಗೆ ತರಲು ಪ್ರೋತ್ಸಾಹಿಸುವುದಾಗಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಹಿಳೆಯರು ಸೇರಿದಂತೆ ಮಕ್ಕಳಿಗೂ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ನೀಡಲಾಗುವ ಅಗ್ರ 20 ಐಡಿಯಾಗಳಿಗೆ ಬಹುಮಾನ ನೀಡಲಾಗುವುದು ಹಾಗೂ ಪುಣೆಯಲ್ಲಿನ ಮಿಲಿಟರಿ ಎಂಜಿನಿಯರಿಂಗ್ ಕಾಲೇಜಿನ ಸೇನಾಧಿಕಾರಿಗಳೊಂದಿಗೆ ಸಂವಹನ ನಡೆಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.