ಅಮರಾವತಿ: ಖ್ಯಾತ ಗಾಯಕ ದಿವಂಗತ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನೆನಪಿಗಾಗಿ ನೆಲ್ಲೂರು ಪಟ್ಟಣದಲ್ಲಿ ಸಂಗೀತ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಂತೆ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ವೈಎಸ್‌ಆರ್‌ಸಿಪಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರಿಗೆ ಪತ್ರ ಬರೆದಿರುವ ಚಂದ್ರಬಾಬು ನಾಯ್ಡು, ಸಂಗೀತ ಕಲಾ ಕ್ಷೇತ್ರವನ್ನು ಸ್ಥಾಪಿಸುವ ಮೂಲಕ ಸಂಗೀತ ದಿಗ್ಗಜ ಎಸ್‌ಪಿಬಿ ಕೊಡುಗೆಯನ್ನು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದ್ದು, ಈ ಮೂಲಕ ಸಂಗೀತ ಮತ್ತು ಲಲಿತ ಕಲೆಗಳನ್ನು ರಾಜ್ಯದಲ್ಲಿ ಪ್ರೋತ್ಸಾಹಿಸಬಹುದು ಎಂದಿದ್ದಾರೆ.
ಬಾಲು ತಮ್ಮ ಅತ್ಯುತ್ತಮ ಕೊಡುಗೆಗಳಿಂದ ಜಗತ್ತಿನಾದ್ಯಂತ ತೆಲುಗು ಜನರು ಹೆಮ್ಮೆಪಡುವಂತೆ ಮಾಡಿದ್ದಾರೆ. ಸಂಗೀತ ವಿಶ್ವವಿದ್ಯಾಲಯದಲ್ಲಿ ಎಸ್‌ಪಿಬಿ ಅವರ ಕಂಚಿನ ಪ್ರತಿಮೆಯನ್ನು ಸರ್ಕಾರ ನಿರ್ಮಿಸಬೇಕು ಎಂದು ನಾಯ್ಡು ಪತ್ರದಲ್ಲಿ ಹೇಳಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಸಂಸ್ಕೃತಿ ಮತ್ತು ಕಲೆಗಳನ್ನು ಉತ್ತೇಜಿಸಲು ಮತ್ತು ಸಂರಕ್ಷಿಸಲು 7ಕ್ಕೂ ಹೆಚ್ಚು ಅಕಾಡೆಮಿಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಮ್ಯೂಸಿಕ್ ಅಕಾಡೆಮಿಗೆ ಎಸ್‌ಪಿಬಿ ಹೆಸರಿಡಬೇಕು ಎಂದಿದ್ದಾರೆ.
ಎಸ್‌ಪಿಬಿ ಅವರ ಜನ್ಮದಿನದಂದು ರಾಜ್ಯ ವಾರ್ಷಿಕವಾಗಿ ಅಧಿಕೃತ ಆಚರಣೆಯನ್ನು ಪ್ರಾರಂಭಿಸಬೇಕು ಮತ್ತು ಅವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಮತ್ತು 10 ಲಕ್ಷ ರೂ. ನಗದು ಬಹುಮಾನವನ್ನು ಪ್ರತೀ ವರ್ಷ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.