ಸೇಲಂ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಯವರ ತಾಯಿ ತವಾಸೈ ಅಮ್ಮಲ್ ಅವರನ್ನು ಕೆಲವು ದಿನಗಳ ಹಿಂದಷ್ಟೇ ಸೇಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಧ್ಯರಾತ್ರಿ 12.15 ಕ್ಕೆ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ತಾಯಿಯ ನಿಧನ ಸುದ್ದಿ ಕೇಳಿದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸೇಲಂಗೆ ದೌಡಾಯಿಸಿದರು.
ಸಿಎಂ ತಾಯಿಯ ಪಾರ್ಥಿವ ಶರೀರವನ್ನು ಮುಖ್ಯಮಂತ್ರಿಯ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ. ಕೊರೊನಾ ಪ್ರಕರಣಗಳನ್ನು ಪರಿಶೀಲಿಸಲು, ಅಪೂರ್ಣಗೊಂಡ ಅಮ್ಮಾ ಕಾಮಗಾರಿಗಳನ್ನು ಪ್ರಾರಂಭಿಸಲು ಮತ್ತು ಹೊಸ ಯೋಜನೆಗಳಿಗೆ ಅಡಿಪಾಯ ಹಾಕಲು ಸಿಎಂ ತೂತುಕುಡಿಗೆ ತೆರಳುತ್ತಿದ್ದರು. ಈ ವೇಳೆ ಮುಖ್ಯಮಂತ್ರಿ ಪಳನಿಸ್ವಾಮಿಗೆ ತಾಯಿಯ ಸಾವಿನ ಸುದ್ದಿ ತಿಳಿದಿದೆ. ಕೂಡಲೇ ಅವರು ಸೇಲಂಗೆ ಮರಳಿದ್ದಾರೆ.
ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ತಾಯಿಯ ನಿಧನದಿಂದಾಗಿ ಇಂದು ಮತ್ತು ನಾಳೆ ನಡೆಯಬೇಕಾಗಿದ್ದ ಕೊರೊನಾ ಪರಿಶೀಲನಾ ಸಭೆ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ದಿವಂಗತ ತವಾಸೈ ಅಮ್ಮಲ್ರ ಅಂತ್ಯಕ್ರಿಯೆ ಇಂದು ನಡೆಯಲಿದೆ.