ರೋಹ್ಟಕ್ (ಹರಿಯಾಣ): ಬಿಹಾರದಿಂದ ಉದ್ಯೋಗವನ್ನು ಅರಸಿ ಹರಿಯಾಣಕ್ಕೆ ತೆರಳಿದ್ದ ವಲಸೆ ಕಾರ್ಮಿಕರು ತಮ್ಮನ್ನು ರಾಜ್ಯಕ್ಕೆ ಕರೆಸಿಕೊಂಡ ಪಕ್ಷಕ್ಕೆ ಮತ ನೀಡುವುದಾಗಿ ಭರವಸೆ ನೀಡಿದ್ದಾರೆ.
ಬಿಹಾರ ಚುನಾವಣೆಯ ಹಿನ್ನೆಲೆಯಲ್ಲಿ ಹಲವು ಕಾರ್ಮಿಕರು ಮತ ಚಲಾಯಿಸುವ ಆಶಯ ವ್ಯಕ್ತಪಡಿಸಿದ್ದು, ಆದರೆ ಬಿಹಾರಕ್ಕೆ ವಾಪಸ್ ಬರಲು ಹಣವಿಲ್ಲದ ಕಾರಣ ರಾಜಕೀಯ ಪಕ್ಷಗಳಿಗೆ ಈ ರೀತಿಯ ಆಮಿಷ ಒಡ್ಡಿದ್ದಾರೆ.
ಕೊರೊನಾ ವೈರಸ್ ಎಲ್ಲಾ ಕಡೆಗಳಲ್ಲಿ ವ್ಯಾಪಾರ ಹಾಗೂ ವ್ಯವಹಾರ ಕುಂಠಿತವಾಗುವಂತೆ ಮಾಡಿದೆ. ಇದರಿಂದ ಹರಿಯಾಣಕ್ಕೆ ವಲಸೆ ಹೋಗಿರುವ ಕಾರ್ಮಿಕರು ಹಣಕಾಸಿನ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ಅವರಿಗೆ ಬಿಹಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಪ್ರಯಾಣ ವೆಚ್ಚ ಭರಿಸಿದರೆ ಸಾಕು ಅದೇ ಪಕ್ಷಕ್ಕೆ ಮತ ಹಾಕುತ್ತೇವೆ. ನಾವು ತಂದಿರುವ ಸ್ವಲ್ಪ ಹಣವೂ ಖಾಲಿಯಾಗುತ್ತಿದೆ ಎಂದು ಬಿಹಾರ ಮೂಲದ ಕಾರ್ಮಿಕ ಮೊಹಮ್ಮದ್ ಖುಷ್ಬೂರ್ ಅಲವತ್ತುಕೊಂಡಿದ್ದಾರೆ.
ಬಿಹಾರದ ಮತ್ತೊಬ್ಬ ಕಾರ್ಮಿಕ ಮೊಹಮ್ಮದ್ ನಿಜಾಮ್, 'ನಾವು ಅಸಹಾಯಕರಾಗಿದ್ದೇವೆ. ಕೆಲಸದ ಹುಡುಕಾಟಕ್ಕಾಗಿ ಇಲ್ಲಿಗೆ ಬಂದಿದ್ದೇವೆ. ಈಗ ನಾವು ಹಿಂತಿರುಗಲು ಸಾಧ್ಯವಿಲ್ಲ. ಯಾವುದೇ ರಾಜಕೀಯ ನಾಯಕ ನಮಗೆ ಬಿಹಾರಕ್ಕೆ ತೆರಳಲು ಸಹಕರಿಸಿದರೆ ಖಂಡಿತವಾಗಿಯೂ ಆತನಿಗೆ ಮತ ಹಾಕುತ್ತೇವೆ' ಎಂದಿದ್ದಾರೆ.
ನಾವು ಲಾಕ್ಡೌನ್ನಿಂದ ಇಲ್ಲಿ ಸಿಲುಕಿಕೊಂಡಿದ್ದೇವೆ. ನಮಗೆ ಕೆಲಸ ಸಿಕ್ಕರೆ ಮಾತ್ರ ನಾವು ಬದುಕುಳಿಯುತ್ತೇವೆ. ನಮಗೆ ಕೆಲಸ ಇಲ್ಲದ ದಿನದಂದು ಉಪವಾಸ ಮಲಗುತ್ತೇವೆ ಎಂದು ಕಾರ್ಮಿಕರೊಬ್ಬರು ತಮ್ಮ ದುಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.