ನವದೆಹಲಿ: ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಡೆದ ಸರ್ಜಿಕಲ್ ಸ್ಟ್ರೈಕ್ಗಳು ಹಾಗೂ ಪಾಕಿಸ್ತಾನದ ಮೇಲೆ ನಡೆದ ಏರ್ ಸ್ಟ್ರೈಕ್ಗಳು ಭಾರತದ ಗಡಿ ಅತಿಕ್ರಮಣ ಮಾಡುವುದು ಮಕ್ಕಳ ಆಟದಂತಲ್ಲ, ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ನಿದರ್ಶನವಾಗಿವೆ ಎಂದು ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.
ಒಡಿಶಾ ಸಂವಾದ್ ವರ್ಚುವಲ್ ರ‍್ಯಾಲಿಯಲ್ಲಿ ಮಾತನಾಡಿದ ಶಾ, ಎನ್‌ಡಿಎ ಸರ್ಕಾರದ ಆಳ್ವಿಕೆಯಲ್ಲಿ ಭಯೋತ್ಪಾದಕ ದಾಳಿಗಳು ನಡೆದಿವೆ, ಆದರೆ ಪ್ರಧಾನಿ ನರೇಂದ್ರ ಮೋದಿ ಸಮಯ ವ್ಯರ್ಥ ಮಾಡಲಿಲ್ಲ. ಹಿಂದಿನ ಪಿಎಂಗಳಂತೆ ಮೌನವಾಗಿ ಕುಳಿತುಕೊಳ್ಳದೆ, ವೈಮಾನಿಕ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ಗಳ ಮೂಲಕ ತಕ್ಕ ಉತ್ತರ ನೀಡಿದರು. ಮತ್ತು ಪಾಕಿಸ್ತಾನಕ್ಕೆ ಪಾಠ ಕಲಿಸಿದರು. ಭಾರತವು ತನ್ನ ಗಡಿಗಳ ಅತಿಕ್ರಮಣವನ್ನು ಸಹಿಸುವುದಿಲ್ಲ ಎಂದು ಜಗತ್ತಿಗೆ ತೋರಿಸಿದೆ ಎಂದು ಅವರು ಹೇಳಿದರು.
ಭಾರತದ ರಕ್ಷಣಾ ನೀತಿಯು ವ್ಯಾಪಕ ಮನ್ನಣೆ ಗಳಿಸಿದೆ. ಯುಎಸ್ಎ ಮತ್ತು ಇಸ್ರೇಲ್ ನಂತರ ತನ್ನ ಗಡಿಗಳನ್ನು ರಕ್ಷಿಸಲು ಸಮರ್ಥವಾದ ಯಾವುದೇ ದೇಶವಿದ್ದರೆ ಅದು ಭಾರತ ಎಂಬುದನ್ನು ಇಡೀ ಜಗತ್ತು ಒಪ್ಪುತ್ತದೆ ಎಂದರು.
ಹಿಂದಿನ ಕಾಲದಲ್ಲಿ ನಮ್ಮ ಗಡಿಗಳಿಗೆ ಯಾರಾದರೂ ಪ್ರವೇಶಿದರೆ, ನಮ್ಮ ಸೈನಿಕರ ಶಿರಚ್ಛೇದನ ಮಾಡಲಾಗುತ್ತಿತ್ತು. ನಮ್ಮ ಸಮಯದಲ್ಲಿ ಉರಿ ಮತ್ತು ಪುಲ್ವಾಮಾ ದಾಳಿಗಳು ಸಂಭವಿಸಿದೆ, ಪಿಎಂ ಮೋದಿ ಮತ್ತು ಬಿಜೆಪಿ ಸರ್ಕಾರವು ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿ ಮೂಲಕ ಪ್ರತ್ಯುತ್ತರ ನೀಡಿದ್ದೇವೆ ಎಂದು ಶಾ ಹೇಳಿದ್ದಾರೆ.