ಪಾಲಕ್ಕಾಡ್ (ಕೇರಳ) : ಕಳೆದ ಎರಡೂವರೆ ದಶಕಗಳಿಂದ ಈ ವ್ಯಕ್ತಿಯ ಜೀವನ ಹಾವುಗಳ ಮಧ್ಯೆಯೇ ಸಾಗಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಚೆರುಪುಲಶೇರಿಯ ಬಿನೀಶ್ ಅದೆಂಥದ್ದೇ ಹಾವಾಗಿರಲಿ ಅದು ಇವರ ಮುಂದೆ ತಲೆಬಾಗುತ್ತದೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುವ ನಾಗರಹಾವು, ಕಾಳಿಂಗ ಸರ್ಪ ಸೇರಿದಂತೆ ವಿವಿಧ ವಿಷ ಪೂರಿತ ಹಾವುಗಳನ್ನು ಹಿಡಿಯುವುದೇ ಇವರ ಕಾಯಕವಾಗಿದೆ.
ಬಿನೀಶ್ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗಲೇ ಹಾವುಗಳತ್ತ ಆಕರ್ಷಣೆಗೊಂಡರು. ಬಳಿಕ ಇವರ ವಯಸ್ಸಿನ ಜೊತೆಗೆ ಸರೀಸೃಪಗಳ ಬಗ್ಗೆ ವ್ಯಾಮೋಹವೂ ಬೆಳೆಯುತ್ತಾ ಸಾಗಿತು. ಹಾವು ಹಿಡಿಯುವವನ ಮುಂದೆ ವಿಷಪೂರಿತ ನಾಗರಹಾವು ಶರಣಾಗುವುದನ್ನು ನೋಡಿದಾಗ, ಉರಗ ರಕ್ಷಕರು ಮತ್ತು ಅವರ ಸಾಮರ್ಥ್ಯದ ಬಗ್ಗೆ ಬಿನೀಶ್ಗೆ ಅಚ್ಚರಿಯಾಗುತ್ತಿತ್ತು. ನಂತರ, ಹಾವು ಹಿಡಿಯುವವರ ಬಗ್ಗೆ ಮೆಚ್ಚುಗೆಯುಂಟಾಯಿತು. ನಂತರ ಬಿನೇಶ್ ಹಾವುಗಳನ್ನು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಳ್ಳಲು ಆರಂಭಿಸಿದರು.
ಬಿನೀಶ್ ಹಾವು ಹಿಡಿಯುವವರ ಬಳಿ ತರಬೇತಿ ಪಡೆಯಲು ನಿರ್ಧರಿಸಿದರು. ಕ್ರಮೇಣ ಹಾವು ಹಿಡಿಯುವವರಿಂದ ಅನೇಕ ಸಲಹೆಗಳು ಮತ್ತು ತಂತ್ರಗಳನ್ನು ಕಲಿತರು. ಈ ಕ್ಷೇತ್ರದಲ್ಲಿ ಬಿನೀಶ್, ಕೊಯಮತ್ತೂರು ಮೂಲದ ಪಾರ್ಥಸಾರಥಿಯಿಂದ ಪ್ರಭಾವಿತರಾದರು. ಬಿನೀಶ್ ಇದುವರೆಗೆ ಹತ್ತಾರು ಹಾವುಗಳನ್ನು ರಕ್ಷಿಸಿದ್ದಾರೆ. ಅವರು 100ಕ್ಕೂ ಹೆಚ್ಚು ವಿಷ ಸರ್ಪಗಳನ್ನು ಸೆರೆಹಿಡಿದು ಕಾಡಿನಲ್ಲಿ ಬಿಟ್ಟಿದ್ದಾರೆ.
ಎರಡು ಬಾರಿ ಹಾವುಗಳಿಂದ ಕಚ್ಚಿ ಸಾವಿನಿಂದ ಪಾರಾಗಿದ್ದಾರೆ. ಹಾವುಗಳನ್ನು ಹಿಡಿಯುವ ಕಲೆಯ ಬಗ್ಗೆ ಅವರು ತಮ್ಮ ಮಕ್ಕಳಿಗೂ ತರಬೇತಿ ನೀಡುತ್ತಿದ್ದಾರೆ. ಈ ಹಿಂದೆ ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ಹಾವಿನ ಉಸ್ತುವಾರಿಗಳನ್ನು ‘ಅರಣ್ಯ ವೀಕ್ಷಕರು’ ಎಂದು ನೇಮಿಸುತ್ತಿತ್ತು.
ಕೇರಳ ಅರಣ್ಯ ಇಲಾಖೆಯ ಅಧೀನದಲ್ಲಿರುವ ಪಾಲಕ್ಕಾಡ್‌ನ ಮಲಂಪುಳ ಹಾವು ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರದಲ್ಲಿ ಬಿನೀಶ್ ತಾತ್ಕಾಲಿಕ ಸಿಬ್ಬಂದಿ ಆಗಿದ್ದಾರೆ. ಹಾವು ರಕ್ಷಿಸುವ ಕಾಯಕವನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಬಿನೀಶ್, 20 ವರ್ಷಗಳ ಸೇವೆ ಪೂರ್ಣಗೊಳಿಸದ್ದಾರೆ.
ಈಗ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಬಿನೀಶ್ ಕೆಲಸ ಮಾಡುವ ಮಲಂಪುಳ ಹಾವು ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರ ಮುಚ್ಚಲಾಗಿದೆ. ಅವರಿಗೆ ಈಗ ಕೇವಲ 15 ದಿನಗಳ ಸಂಬಳ ನೀಡಲಾಗುತ್ತಿದೆ. ಇದರಿಂದ ಆದಾಯ ಕಡಿಮೆಯಾಗಿದ್ದು, ಬಿನೀಶ್ ತನ್ನ ಸಂಸಾರ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಸರ್ಕಾರ ಕೂಡ ಉರಗ ರಕ್ಷಕರಿಗೆ ಯಾವುದೇ ಸಹಾಯ ನೀಡದಿರುವುದು, ಅವರ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಆದ್ದರಿಂದ ಸರ್ಕಾರ ಆದಷ್ಟು ಬೇಗ ತಮಗೂ ಪರಿಹಾರ ನೀಡಬೇಕೆಂಬುದು ಉರಗ ರಕ್ಷಕರ ಬೇಡಿಕೆಯಾಗಿದೆ.