ನವದೆಹಲಿ: ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ರದ್ದುಗೊಳಿಸಿದ ನಡೆ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಪಾಕ್ ಮೂಲದ ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಪಾಕಿಸ್ತಾನ ಮೂಲದ ಜೈಶೆ ಉಗ್ರ ಸಂಘಟನೆ ಪುಲ್ವಾಮಾ ಮಾದರಿ ದಾಳಿಗೆ ಸಂಚು ರೂಪಿಸಿದ್ದು, ಕಣಿವೆ ರಾಜ್ಯ ಸೇರಿದಂತೆ ದೇಶದ ವಿವಿಧ ಏಳು ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುವ ಸಾಧ್ಯತೆ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.
ಗುಪ್ತಚರ ಇಲಾಖೆ ಮಾಹಿತಿಯ ಆಧಾರದಲ್ಲಿ ದೆಹಲಿ, ರಾಜಸ್ಥಾನ, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ವಿಮಾನ ನಿಲ್ದಾಣ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಉಗ್ರರ ದಾಳಿಯ ಬಗ್ಗೆ ಈಗಾಗಲೇ ಮಾಹಿತಿ ಲಭ್ಯವಾಗಿದ್ದು, ಕಾಶ್ಮೀರ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ತೀವ್ರ ನಿಗಾ ಇಡಲಾಗಿದೆ.