ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸೇರಿ ಏಳು ರಾಜ್ಯದ ಸಿಎಂಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ JEE ಮತ್ತು NEET ಪರೀಕ್ಷೆ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಎಲ್ಲ ವಿಪಕ್ಷಗಳು ಒಗ್ಗೂಡುವಂತೆ ಅವರು ವಿಡಿಯೋ ಸಂವಾದದ ವೇಳೆ ಕರೆ ನೀಡಿದ್ದಾಗಿ ತಿಳಿದು ಬಂದಿದೆ. ವಿಡಿಯೋ ಸಂವಾದದಲ್ಲಿ ಪಂಜಾಬ್ ಸಿಎಂ ಅಮರೀಂದರ್ ಸಿಂಗ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಛತ್ತೀಸಗಢ ಸಿಎಂ ಭೋಪೇಶ್ ಬಘೇಲ್,ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಪಾಂಡಿಚೇರಿ ಸಿಎಂ ವಿ. ನಾರಾಯಣಸ್ವಾಮಿ ಭಾಗಿಯಾಗಿದ್ದರು.
ಬಿಜೆಪಿಯೇತರ ಮುಖ್ಯಮಂತ್ರಿಗಳ ಜಂಟಿ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರದಿಂದ ಹೊಸದಾಗಿ ಜಾರಿಗೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆ ಅನೇಕ ಸಮಸ್ಯೆಗಳಿಂದ ಕೂಡಿದೆ. ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆ ಆಗಲಿದೆ ಎಂದು ಅವರು ತಿಳಿಸಿದರು. ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಶೇ.14ರಷ್ಟು ಜಿಎಸ್ಟಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಇಂದು ರಾಜ್ಯಗಳಿಗೆ ಮೋದಿ ಸರ್ಕಾರದಿಂದ ಆಗುತ್ತಿರುವ ದ್ರೋಹ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಇದೇ ವೇಳೆ, JEE/NEET ಪರೀಕ್ಷೆ ಮುಂದೂಡಿಕೆ ಮಾಡುವಂತೆ ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಅವಶ್ಯಕತೆ ಇದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಈ ವಿಚಾರದಲ್ಲಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಅವರು ತಿಳಿಸಿದ್ದಾರೆ. ಪರೀಕ್ಷೆ ಮುಂದೂಡಿಕೆ ಮಾಡುವಂತೆ ಈಗಾಗಲೇ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರಿಗೆ ಪತ್ರ ಸಹ ಬರೆದಿದ್ದಾರೆ.