ನವದೆಹಲಿ: 2017 ರಲ್ಲಿ ಹೊಸ ತೆರಿಗೆ ನಿಯಮ ಜಾರಿಗೆ ಬಂದ ನಂತರ ಇದೇ ಎರಡನೇ ಬಾರಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಾಸಿಕ ಸಂಗ್ರಹವು 1.1 ಲಕ್ಷ ಕೋಟಿ ರೂ.ಗಳನ್ನು ದಾಟಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
2020ರ ಜನವರಿಯಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,10,828 ಕೋಟಿ ರೂ. ಇದರಲ್ಲಿ ಸಿಜಿಎಸ್‌ಟಿ 20,944 ಕೋಟಿ ರೂಪಾಯಿ, ಎಸ್‌ಜಿಎಸ್‌ಟಿ 28,224 ಕೋಟಿ ರೂಪಾಯಿ, ಐಜಿಎಸ್‌ಟಿ 53,013 ಕೋಟಿ ರೂಪಾಯಿ(ಆಮದುಗಳಲ್ಲಿ ಸಂಗ್ರಹಿಸಿದ ಮೊತ್ತ 23,481 ಕೋಟಿ ರೂಪಾಯಿ) ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ಮಾಸಿಕ ಜಿಎಸ್‌ಟಿ ಆದಾಯವು ಒಂದು ಲಕ್ಷ ಕೋಟಿ ರೂಪಾಯಿಗೆ ಏರುತ್ತಿರುವುದು ಇದು ಆರನೇ ಬಾರಿಗೆ ಎಂದು ತಿಳಿದು ಬಂದಿದೆ.
2019ರ ಜನವರಿ ತಿಂಗಳಲ್ಲಿನ ಜಿಎಸ್‌ಟಿ ಮಾಸಿಕ ಆದಾಯವು 1.1 ಲಕ್ಷ ಕೋಟಿ ರೂ.ಗಳನ್ನು ದಾಟಿತ್ತು. ಆದರೆ, 2020ರ ಜನವರಿ ತಿಂಗಳಲ್ಲಿ ಸಂಗ್ರಹವಾದ ಜಿಎಸ್‌ಟಿ ಮಾಸಿಕ ಆದಾಯವು 2019ಕ್ಕಿಂತ ಶೇಕಡಾ 12 ರಷ್ಟು ಬೆಳವಣಿಗೆಯನ್ನು ತೋರಿಸಿದೆ ಎಂದು ಅಂಕಿಅಂಶಗಳಿಂದ ತಿಳಿದು ಬಂದಿದೆ.