ತಿರುವನಂತಪುರ: ಬಾವಲಿ ಜ್ವರದ ಭೀತಿಯಿಂದ ಈಗಷ್ಟೆ ಹೊರಬಂದಿದ್ದ ಕೇರಳದಲ್ಲಿ ಈಗ ನೈಲ್ ಫಿವರ್ (ಕಡು ನೀಲಿ ಜ್ವರ) ಕಾಣಿಸಿಕೊಂಡಿದೆ.
ವೆಸ್ಟ್ ನೈಲ್ ಫಿವರ್ನಿಂದ ಬಳಲುತ್ತಿದ್ದ ಆರು ವರ್ಷದ ಬಾಲಕನೊಬ್ಬ ಸಾವಿಗೀಡಾಗಿದ್ದು, ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಹಕ್ಕಿಗಳಿಂದ ಈ ವೈರಸ್ ಸೃಷ್ಟಿಯಾಗಿದೆ ಎಂದು ಪ್ರಾಥಮಿಕ ಸಂಶೋಧನೆಯಿಂದ ತಿಳಿದುಬಂದಿದ್ದು, ಸೊಳ್ಳೆಗಳಿಂದ ಈ ರೋಗ ಹರಡುತ್ತಿದೆ. ಸದ್ಯ ಇದಕ್ಕೆ ಯಾವುದೇ ಔಷಧಗಳು ಇಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.
ಈ ರೋಗ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲ. ಸೊಳ್ಳೆಗಳು ರೋಗ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಹಾಗಾಗಿ ಅದರ ಬಗ್ಗೆ ಎಚ್ಚರ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ರೋಗದ ಲಕ್ಷಣಗಳೇನು?
ನೈಲ್ ಫಿವರ್ ಮಲೇರಿಯಾ ರೋಗದ ಬಹುತೇಕ ಲಕ್ಷಣಗಳನ್ನು ಹೊಂದಿದೆ. ತೀವ್ರ ಜ್ವರ, 7 ದಿನಕ್ಕೂ ಹೆಚ್ಚು ಕಾಲ ಬಿಡದ ಫಿವರ್. ಚಳಿಯ ಅನುಭವ, ಸುಸ್ತು, ವಾಂತಿ ಇದು ರೋಗದ ಲಕ್ಷಣಗಳು ಎಂದು ವೈದ್ಯರು ಹೇಳುತ್ತಾರೆ.