ಶಿವಕಾಶಿ/ ತಮಿಳುನಾಡು: ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಕರಿನೆರಳು ಯಾರನ್ನೂ ಬಿಟ್ಟಿಲ್ಲ. ಈ ಮಹಾಮಾರಿಯಿಂದಾಗಿ ಕಾರ್ಖಾನೆಗಳು ಮುಚ್ಚಿದ ಪರಿಣಾಮ ಅದೆಷ್ಟೋ ಕಾರ್ಮಿಕರು ತುತ್ತು ಅನ್ನಕ್ಕೂ ಅಲೆದಾಡುವಂತಾಗಿದೆ. ಪಟಾಕಿ ಕಾರ್ಖಾನೆಗಳ ಕಾರ್ಮಿಕರು ಕೂಡಾ ಇದರಿಂದ ಹೊರತಾಗಿಲ್ಲ.
ಪಟಾಕಿಗಳ ತಯಾರಿಕೆ ಕಾರಣ ತನ್ನನ್ನು 'ಮಿನಿ ಜಪಾನ್' ಎಂದೇ ಗುರುತಿಸಿಕೊಂಡಿರುವ ತಮಿಳುನಾಡಿನ ಶಿವಕಾಶಿ ಪಟಾಕಿ ತಯಾರಿಕಾ ಕಾರ್ಖಾನೆಗಳಲ್ಲಿ ದಿನಗೂಲಿಗಾಗಿ ದುಡಿಯುವ ಅಸಂಖ್ಯಾತ ಪುರುಷರು ಮತ್ತು ಮಹಿಳಾ ಕಾರ್ಮಿಕರಿದ್ದಾರೆ. ದೇಶಾದ್ಯಂತ ಕೊರೊನಾ ಲಾಕ್ಡೌನ್ ಜಾರಿಯಾದ ಹಿನ್ನೆಲೆ ಅವರ ಜೀವನೋಪಾಯವಾಗಿದ್ದ ಪಟಾಕಿ ಕಾರ್ಖಾನೆಗಳು ಈಗ ಮುಚ್ಚಲ್ಪಟ್ಟಿವೆ. ಹೀಗಾಗಿ ಅವರಿಗೆ ಜೀವನ ಸಾಗಿಸಲು ದಿಕ್ಕೇ ತೋಚದಂತಾಗಿದೆ. ಲಾಕ್ಡೌನ್ ನಿಂದಾಗಿ ಒಂದು ಕಡೆ ಕುಟುಂಬದವರನ್ನು ಸೇರಲಾಗದ ಕೊರಗು ಮತ್ತೊಂದೆಡೆ ಹಸಿವು, ಬಡತನ ಅವರನ್ನು ಬಾಧಿಸುತ್ತಿವೆ.
ವಿರುಧನಗರ ಜಿಲ್ಲೆಯ ಶಿವಕಾಶಿ ಮತ್ತು ಸುತ್ತಮುತ್ತ ಸುಮಾರು 1,100 ಕಡೆಗೂ ಹೆಚ್ಚು ಪಟಾಕಿ ತಯಾರಿಕಾ ಕಾರ್ಖಾನೆಗಳಿವೆ. 5 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಪಟಾಕಿ ಉದ್ಯಮದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಈಗಾಗಲೇ, ಪರಿಸರ ಸ್ನೇಹಿ ಹಸಿರು ಪಟಾಕಿ ಸಮಸ್ಯೆಯಿಂದಾಗಿ ಪಟಾಕಿ ಮಾರಾಟಗಾರರು ಮತ್ತು ಕಾರ್ಮಿಕರು ಕಳೆದ ವರ್ಷ ಮೂರು ತಿಂಗಳ ಕಾಲ ಪ್ರಮುಖ ಜೀವನೋಪಾಯ ಸಮಸ್ಯೆಯನ್ನು ಎದುರಿಸಿದ್ದರು. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್ನ ತೀರ್ಪಿಗಾಗಿ ಕಾದು ಕುಳಿತ್ತಿದ್ದರು. ಅದೆಷ್ಟೋ ತಾಯಂದಿರು ತಮ್ಮ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಖರೀದಿಸಬಹುದೇ ಎಂದು ಚಿಂತಿಸುತ್ತಿದ್ದ ಕರುಣಾಜನಕ ದೃಶ್ಯಗಳಿಗೂ ಶಿವಕಾಶಿ ಸಾಕ್ಷಿಯಾಗಿತ್ತು.
ಆದರೆ ಇದೀಗ ಲಾಕ್‌ಡೌನ್‌ನಿಂದಾಗಿ ಪಟಾಕಿ ಉದ್ಯಮವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಟಾಕಿ ಉದ್ಯಮಗಳನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಕಾರ್ಮಿಕ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ಆದಾಯವಿಲ್ಲದೇ ಒಂದು ದಿನವನ್ನೂ ಕೂಡ ದೂಡಲಾಗದ ದುಸ್ಥಿತಿ ಈ ಜನರದ್ದು. ಅಂಥದ್ದರಲ್ಲಿ ಇಷ್ಟೊಂದು ದಿನ ಕೆಲಸವೇ ಇಲ್ಲದೇ ಕೂರುವಂತಾಗಿದೆ. ಇಂತಹ ಸಮಯದಲ್ಲಿ ಅವರ ಬದುಕು ಊಹಿಸಲಸಾಧ್ಯ.
ಒಂದೆಡೆ ಸರ್ಕಾರ ಇವರ ಜೀವನ ನಿರ್ವಹಣೆಗೆ ಮಾಸಿಕ 1 ಸಾವಿರ ನೀಡುತ್ತಿದೆ. ಆದರೆ ಇದರಿಂದ ಇಡೀ ಕುಟುಂಬ ನಿರ್ವಹಣೆ ಸಾಧ್ಯವೇ? ಹೀಗಾಗಿ ಈ ಪಟಾಕಿ ಕಾರ್ಮಿಕರ ನಿರೀಕ್ಷೆಗಳೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಹಾಯವನ್ನು ನೀಡಬೇಕು ಎಂಬುದು.
ಇದೇ ಏಪ್ರಿಲ್ 6 ರಂದು ಈಟಿವಿ ಭಾರತ್ ಲಾಕ್‌ಡೌನ್‌ನಿಂದಾಗಿ ಪಟಾಕಿ ಕಾರ್ಮಿಕರು ಎದುರಿಸುತ್ತಿರುವ ದುಃಸ್ಥಿತಿಯ ಬಗ್ಗೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅವರ ಬೇಡಿಕೆಯ ಕುರಿತು ಸುದ್ದಿ ಮಾಡಿತ್ತು.ಇದರ ಫಲಶ್ರುತಿಯಾಗಿ ವಿರುಧುನಗರ ಲೋಕಸಭಾ ಸದಸ್ಯ ಮಾಣಿಕಂ ಠಾಕೂರ್ ಅವರು ಪ್ರಧಾನಿ ಮೋದಿ ಮತ್ತು ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಅವರಿಗೆ ಉದ್ಯೋಗ ಕಳೆದುಕೊಂಡಿರುವ ಬೆಂಕಿಪೊಟ್ಟಣ ಮತ್ತು ಮತ್ತು ಪಟಾಕಿ ಉದ್ಯಮದ ಕಾರ್ಮಿಕರಿಗೆ ತಲಾ 7,500 ರೂ. ನೀಡುವಂತೆ ಪತ್ರ ಬರೆದಿದ್ದಾರೆ.
ಒಟ್ಟಿನಲ್ಲಿ ಕೊರೊನಾದಿಂದಾಗಿ ಬಣ್ಣ-ಬಣ್ಣದ ಪಟಾಕಿ ತಯಾರಿಸಿ ಆಕಾಶವನ್ನು ಅಲಂಕರಿಸುತ್ತಿದ್ದ, ಪಟಾಕಿ ತಯಾರಕರ ಬದುಕಿಗೆ ಕತ್ತಲೆಯ ಕಾರ್ಮೋಡ ಆವರಿಸಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಪಟಾಕಿ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಬೇಕು.