ಶಿರಡಿ(ಮಹಾರಾಷ್ಟ್ರ): ವಾರ್ಷಿಕ 400 ಕೋಟಿ ರೂಪಾಯಿ ಆದಾಯ ಗಳಿಸುವ ಶಿರಡಿ ಸಾಯಿ ಬಾಬಾ ದೇವಾಲಯ ಸಂಕಷ್ಟಕ್ಕೆ ಸಿಲುಕಿದ್ದು, ನೌಕರರ ಸಂಬಳ ಭರಿಸಲೂ ಟ್ರಸ್ಟ್ಗೆ ಕಷ್ಟವಾಗಿದೆ.
ನೌಕರರು ಪ್ರತಿ ತಿಂಗಳು ಐದನೇ ತಾರೀಖಿನಂದು ತಮ್ಮ ವೇತನವನ್ನು ಪಡೆಯುತ್ತಿದ್ದರು ಆದರೆ ಈ ಬಾರಿ ಹದಿನೈದು ದಿನ ಕಳೆದರೂ ಸಂಬಳ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 32 ಉದ್ಯೋಗಿಗಳಿಗೆ ಕಳೆದ ನವೆಂಬರ್ನಿಂದ ವೇತನ ನೀಡಿಲ್ಲ. ತಕ್ಷಣ ಸಂಬಳ ಪಾವತಿಸಿ ಎಂದು ನೌಕರರು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಳೆದ 90 ದಿನಗಳಿಂದ ಲಾಕ್‌ಡೌನ್ ದೃಷ್ಟಿಯಿಂದ ದೇವಾಲಯವನ್ನು ಮುಚ್ಚಲಾಗಿತ್ತು, ಇದರಿಂದಾಗಿ ದೇಣಿಗೆ ಹರಿವು ಸ್ಥಗಿತಗೊಂಡಿದೆ. ಲಾಕ್‌ಡೌನ್ ಸಮಯದಲ್ಲಿ ಟ್ರಸ್ಟ್ಗೆ ಪ್ರತಿದಿನ 1.58 ಕೋಟಿ ರೂ ನಷ್ಟವಾಗಿದೆ. ಯಾವುದೇ ದೇಣಿಗೆಗಳು ಬರದ ಕಾರಣ ಟ್ರಸ್ಟ್ ಸಂಕಷ್ಟಕ್ಕೀಡಾಗಿದ್ದು, ಸಿಬ್ಬಂದಿಗೆ ಸಮಸ್ಯೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮೊದಲು ಪಡೆದ ದೇಣಿಗೆಗಳನ್ನು ವಿವಿಧ ರಾಷ್ಟ್ರೀಯ ಬ್ಯಾಂಕ್ಗಳಲ್ಲಿ ಸ್ಥಿರ ಠೇವಣಿಗಳಾಗಿ ಪರಿವರ್ತಿಸಲಾಗಿತ್ತು, ಇದನ್ನು ಲಾಕ್‌ಡೌನ್‌ನ ಆರಂಭಿಕ ಹಂತದಲ್ಲಿ ನೌಕರರಿಗೆ ಸಂಬಳ ಪಾವತಿಸಲು ಬಳಸಲಾಗುತ್ತಿತ್ತು. ಆದರೆ ಮೇ ತಿಂಗಳಲ್ಲಿ, ಕಾಯಂ ಸಿಬ್ಬಂದಿ, ತಮ್ಮ ಸಂಬಳವನ್ನು ಸ್ವೀಕರಿಸಿಲ್ಲ. ಈ ಬಗ್ಗೆ ಟ್ರಸ್ಟ್ ಅನ್ನು ಸಂಪರ್ಕಿಸಿದ್ದು, ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದಿದ್ದಾರೆ.