ಕೊಲ್ಕತ್ತ : ಕೊರೊನಾ ಈಗ ಇಡೀ ಜಗತ್ತಿಗೆ ಹೆಮ್ಮಾರಿಯಾಗಿ ಕಾಡುತ್ತಿದೆ. ಹಲವಾರು ಸಂಸ್ಥೆಗಳು, ಕಾಲೇಜುಗಳಿಗೆ ಸರ್ಕಾರಗಳು ರಜೆ ಘೋಷಿಸಿ ಈ ಸೋಂಕಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ದಿನನಿತ್ಯ ಮಾಹಿತಿಗಳನ್ನು ಜನರಿಗೆ ನೀಡುತ್ತಿವೆ. ಆದರೆ, ಮಾರಕ ಸೋಂಕು ಪಶ್ಚಿಮ ಬಂಗಾಲದ ರಾಜಧಾನಿ ಕೋಲ್ಕತ್ತಾದ ರೆಡ್ ಲೈಟ್ ಏರಿಯಾ ಜನರ ಜೀವನವನ್ನೇ ಈಗ ನರಕವನ್ನಾಗಿಸಿದೆ.
ಪಶ್ಚಿಮ ಬಂಗಾಳದಲ್ಲಿನ ರೆಡ್ ಲೈಟ್ ಏರಿಯಾಗೆ ಬರುವ ಜನರ ಸಂಖ್ಯೆ ಕೊರೊನಾ ಭೀತಿಯಿಂದ ಕಡಿಮೆಯಾಗಿದೆ. ಪರಿಣಾಮ, ಲೈಂಗಿಕ ಚಟುವಟಿಕೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದ ಲೈಂಗಿಕ ಕಾರ್ಯಕರ್ತರ ಬದುಕೀಗ ಬೀದಿಗೆ ಬಿದ್ದಿದೆ. ಕೆಲವು ಕಾರ್ಯಕರ್ತರು ಕೊರೊನಾ ಲೆಕ್ಕಿಸದೆ ಗ್ರಾಹಕರಿಗಾಗಿ ಕಾದು ಕುಳಿತರೆ ಇನ್ನು ಕೆಲವರು ಸುರಕ್ಷತೆ ದೃಷ್ಠಿಯಿಂದ ಮನೆಯಿಂದ ಹೊರಗೆ ಬರುತ್ತಿಲ್ಲ.
'ಪ್ರತಿದಿನ 20 ಸಾವಿರ ಜನ ರೆಡ್ ಲೈಟ್ ಏರಿಯಾಗೆ ಬರುತ್ತಿದ್ದರು'
ಪ್ರತಿದಿನ ಇಲ್ಲಿಗೆ 20 ಸಾವಿರ ಮಂದಿ ಬಂದು ಹೋಗುತ್ತಿದ್ದರು. ಆದರೀಗ ಯಾರೂ ಈ ಕಡೆ ಮುಖ ಮಾಡುತ್ತಿಲ್ಲ ಎಂದು ಲೈಂಗಿಕ ಕಾರ್ಯಕರ್ತರ ಸಂಘಟನೆಯ ಕಾರ್ಯದರ್ಶಿ ಕಾಜೋಲ್ ಬೋಸ್ ಬೇಸರ ವ್ಯಕ್ತಪಡಿಸುತ್ತಾರೆ.
ರೆಡ್ ಲೈಟ್ ಏರಿಯಾದ ಪ್ರಮುಖ ಪ್ರದೇಶಗಳಾದ ಶಿಯೋರಾಫುಲಿ, ಡೊಮ್ಜೂರ್, ಉಲುಬೇರಿಯಾ, ಕಲ್ನಾ, ಶಾಂತಿಪುರ, ದಿನ್ಹಾಟಾ, ಪಂಜಿಪರಾ, ಕೂಚ್‌ಬೆಹರ್ ಸೇರಿದಂತೆ ರಾಜ್ಯದ ಇತರ ಭಾಗಗಳಿಗೆ ಜನ ಬರ್ತಿಲ್ಲ ಎಂದು ಕಾರ್ಯಕರ್ತೆ ರೀಟಾ ರಾಯ್ ತಿಳಿಸಿದ್ದು, ಜೀವನ ನಿರ್ವಹಣೆ ಬಗ್ಗೆ ನಮಗೆ ಚಿಂತೆಯಾಗಿದೆ ಅನ್ನೋದು ಅವರ ನೋವು.
ಕೊರೊನಾದಿಂದ ನಮ್ಮ ಜೀವನಕ್ಕೀಗ ಸಂಕಷ್ಟ ಎದುರಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಮ್ಮ ಮನೆಗಳಿಗೆ ಹಣ ಕಳುಹಿಸಲು ಕಷ್ಟವಾಗುತ್ತದೆ. ಅಲ್ಲದೆ, ಕೊಠಡಿ ಬಾಡಿಗೆ, ನನ್ನ ಮಗನ ಶೈಕ್ಷಣಿಕ ಶುಲ್ಕ ಹಾಗೂ ನನ್ನ ತಾಯಿಯ ವೈದ್ಯಕೀಯ ವೆಚ್ಚವನ್ನು ಹೇಗೆ ತಾನೆ ಭರಿಸಲಿ? ಎಂದು ತಮ್ಮ ದುಃಖ ವ್ಯಕ್ತಪಡಿಸಿದರು.
ಗರಿಯಾ ಪ್ರದೇಶದಲ್ಲಿ ವಾಸಿಸುವ ಸೀಮಾ ಹಾಲ್ಡರ್ ಎಂಬುವ ಮತ್ತೊಬ್ಬ ಲೈಂಗಿಕ ಕಾರ್ಯಕರ್ತೆ ಮಾತನಾಡಿದ್ದು, ಈ ಮೊದಲು ಪ್ರತಿದಿನ ನಾಲ್ಕು ಮಂದಿಯಾದ್ರೂ ಬರುತ್ತಿದ್ದರು. ಈಗ ಒಬ್ಬರೂ ಬರುತ್ತಿಲ್ಲ, ಜೀವನ ತುಂಬಾ ಕಷ್ಟಕರವಾಗಿದೆ ಎಂದು ಕೊರೊನಾಗೆ ಶಾಪ ಹಾಕುತ್ತಿದ್ದಾರೆ.
ಇನ್ನು ಈಗ ಬರುತ್ತಿರುವ ಕೆಲವು ಮಂದಿ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ತಿಳಿದುಕೊಳ್ಳಲು ದೂರದಿಂದಲೇ ಅವರನ್ನು ಮಾತನಾಡಿಸಿ ನಂತರ ಅವರಿಗೆ ಯಾವುದೇ ಸೋಂಕು ಇಲ್ಲ ಎಂದು ಗೊತ್ತಾದಾಗ ಮಾತ್ರ ಅವರ ಜೊತೆ ದೈಹಿಕ ಸಂಪರ್ಕ ಮಾಡುತ್ತೇವೆ. ಇದರಿಂದ ನಮ್ಮಲ್ಲೂ ಕೂಡ ಸೋಂಕು ತಗುಲಬಹುದು ಎಂಬ ಭಯ ಕಾಡತೊಡಗಿದೆ ಎಂದು ಮತ್ತೊಬ್ಬ ಕಾರ್ಯಕರ್ತೆ ಆತಂಕ ವ್ಯಕ್ತಪಡಿಸುತ್ತಾರೆ.