ನವದೆಹಲಿ: ಸರಕು ಸಾಗಣೆ ಉದ್ಯಮ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ನೀಡಲು ಪ್ರತ್ಯೇಕವಾದ ವಿಭಾಗ ರಚನೆ ಮಾಡುವಂತೆ ಕೇಂದ್ರ ವಾಣಿಜ್ಯ ಸಚಿವಾಲಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಎನ್ಡಿಎನ ನೂತನ ಸರ್ಕಾರಕ್ಕೆ ವಾಣಿಜ್ಯ ಸಚಿವಾಲಯ 100 ದಿನದ ಕಾರ್ಯಕ್ರಮಗಳ ಪ್ರಸ್ತಾವನೆ ತಯಾರಿಸಿದ್ದು, ರಫ್ತು ವಹಿವಾಟು ವೃದ್ಧಿಸಲು ಹಾಗೂ ನವೋದ್ಯಮಕ್ಕೆ ಉತ್ತೇಜನ ನೀಡುವಂತಹ ಅಂಶಗಳನ್ನು ಸೇರಿಸಿದೆ.
ಸರಕು ಸಾಗಣೆ ಉದ್ಯಮದ ಬೆಳವಣಿಗೆಗಾಗಿ ಕಾರ್ಯದರ್ಶಿ ನೇತೃತ್ವದಲ್ಲಿ ಪ್ರತ್ಯೇಕವಾದ ವಿಭಾಗ ರಚನೆ ಮಾಡುವ ಅಗತ್ಯ ಇದೆ. ರಫ್ತು ಹಾಗೂ ಆಮದು ವಹಿವಾಟು ಹೆಚ್ಚಿಸಲು ಇದು ಮುಖ್ಯವಾಗಿದೆ ಎಂದು ತಿಳಿಸಿದೆ.
ಸಾಗಣೆ ವೆಚ್ಚ ಮತ್ತು ಸಮಯ ತಗ್ಗಿಸುವ ಮೂಲಕ ಸರಕು ಸಾಗಣೆ ವ್ಯವಸ್ಥೆ ಸರಳಗೊಳಿಸಬೇಕು. ಈ ಮುಖೇನ ರಫ್ತುದಾರರ ಹಾಗೂ ದೇಶಿ ವರ್ತಕರ ಮಧ್ಯೆ ಪೈಪೋಟಿ ಹೆಚ್ಚಾಗುವಂತೆ ಮಾಡಬೇಕು. ರಸ್ತೆ, ರೈಲು, ಬಂದರು, ವಿಮಾನ ವಲಯದ ಸಹಕರ ಅಗತ್ಯವಾಗುತ್ತದೆ. ಈ ಬಗ್ಗೆಯೂ ಕೇಂದ್ರ ಗಮನಹರಿಸಬೇಕು ಎಂದು ಸೂಚಿಸಿದೆ.