ಅಯೋಧ್ಯ(ಉತ್ತರ ಪ್ರದೇಶ): ರಾಮಮಂದಿರ ನಿರ್ಮಾಣಕ್ಕೆ ದಿನಾಂಕ ನಿಗದಿ ಮತ್ತು ನಿರ್ಮಾಣ ಕಾರ್ಯಕ್ಕೆ ಇಬ್ಬರು ಟ್ರಸ್ಟಿಗಳನ್ನು ನೇಮಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲು ಫೆ.19ರಂದು ರಾಮಮಂದಿರ ಟ್ರಸ್ಟ್ ಮೊದಲ ಸಭೆ ನಡೆಸಲಿದೆ. ಹೀಗಾಗಿ ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕಾರ್ಯ ಸೂಚಿಯಂತೆ ಈ ನಿರ್ಧಾರ ಕೈಗೊಳ್ಳಲಾಗುತ್ತದೆ. ಏಪ್ರಿಲ್ ಮೊದಲ ವಾರದಲ್ಲಿ ಬರುವ ಶ್ರೀರಾಮನವಮಿ ಹಬ್ಬದಂದು ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಭಾಗವಹಿಸುವ ಟ್ರಸ್ಟಿಗಳ, ಸಮಿತಿ ಸದಸ್ಯರು, ಹಿರಿಯರು, ಪ್ರಮುಖರ ಅಭಿಪ್ರಾಯ, ತೀರ್ಮಾನ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.
ಸಭೆ ಪ್ರಯುಕ್ತ ಅಯೋಧ್ಯೆ ಆವರಣದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಗಳನ್ನು ವಶಕ್ಕೆ ಪಡೆಯಲು ಅಲ್ಲಿನ ಪೊಲೀಸ್ ಇಲಾಖೆ ಸೂಚಿಸಿದೆ. ಡಿಜಿಪಿ ಹಿತೇಶ್ ಚಂದ್ರ ಅವರು ಭದ್ರತಾ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಅಯೋಧ್ಯೆ ನೋಡಲು ಪ್ರವಾಸಿಗರ ಸಂಖ್ಯೆಯಲ್ಲಿ ದಿನೆದಿನೇ ಹೆಚ್ಚಳವಾಗುತ್ತಿದೆ. ಆದ್ದರಿಂದ ಹೆಚ್ಚು ಭದ್ರತೆ ಕೈಗೊಳ್ಳಲಾಗಿದೆ.